

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆ ಪದಾಧಿಕಾರಿಗಳು ನಗರದ ಡಿ.ಕ್ರಾಸ್ ವೃತ್ತದಲ್ಲಿ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.
ವೇದಿಕೆ ಕಾರ್ಯಾಧ್ಯಕ್ಷ ಬಿ.ಎನ್.ಮಂಜುನಾಥ್ ಮಾತನಾಡಿ, ಮುಂಗಾರು ಮಳೆ ಕೊರತೆಯಿಂದ ರಾಜ್ಯದಲ್ಲಿ ಬರಗಾಲ ಆವರಿಸಿದೆ. ಕೆರೆ, ಕುಂಟೆ, ಅಣೆಕಟ್ಟುಗಳಲ್ಲಿ ನೀರಿಲ್ಲದೆ ಕುಡಿಯುವ ನೀರಿಗೂ ಪರಿತಪಿಸುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ತಮಿಳುನಾಡಿಗೆ ಕೆಆರ್‌ಎಸ್ ಡ್ಯಾಮಿನಿಂದ ನೀರು ಹರಿಸಿ ನಾಡಿನ ಜನತೆಗೆ ಅನ್ಯಾಯ ಮಾಡುವ ಮೂಲಕ ಉದ್ಧಟತನ ಪ್ರದರ್ಶಿಸುತ್ತಿದೆ ಎಂದರು.
ರಾಜಕಾರಣಿಗಳು ಮತಬ್ಯಾಂಕ್‌ಗಾಗಿ ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿದ್ದಾರೆ. ಇದರಿಂದ ಮಂಡ್ಯ, ಮೈಸೂರು ಭಾಗದ ರೈತರ ವ್ಯವಸಾಯಕ್ಕೆ ಹಾಗೂ ಬೆಂಗಳೂರಿನ ಜನರಿಗೆ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದಾಗಿ ಕಿ.ಮೀ.ಗಟ್ಟಲೆ ವಾಹನಗಳು ನಿಂತು ಸಂಚಾರಕ್ಕೆ ಸಮಸ್ಯೆಯಾಯಿತು.