ಕೇಂದ್ರ ಜನವಿರೋಧಿ ನೀತಿ ವಿರುದ್ಧ ಪ್ರಚಾರಾಂದೋಲನ

doddaballapura protest
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನವಿರೋಧಿ ನೀತಿಗಳನ್ನು ಜಾರಿಗೊಳಿಸಿರುವುದನ್ನು ವಿರೋಧಿಸಿ ಆ. 1ರಿಂದ 14 ರವರೆಗೆ ದೇಶವ್ಯಾಪಿ ಪ್ರಚಾರಾಂದೋಲನಕ್ಕೆ ಕರೆ ನೀಡಲಾಗಿದೆ ಎಂದು ರೈತ ಪ್ರಾಂತ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್. ಚಂದ್ರ ತೇಜಸ್ವಿ ತಿಳಿಸಿದರು.
ನಗರದ ತಾಲೂಕು ಕಚೇರಿ ವೃತ್ತದಲ್ಲಿ ಸಿಐಟಿಯು, ಎಐಕೆಎಸ್, ಪ್ರಾಂತ ರೈತ ಸಂಘ ಹಾಗೂ ವಿವಿಧ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ಪ್ರಚಾರಾಂದೋಲನದಲ್ಲಿ ಮಾತನಾಡಿದರು. ಆ. 14ರ ಸಂಜೆಯಿಂದ ಆ.15ರ ಬೆಳಗಿನ ಜಾವದವರೆಗೆ ಸರ್ಕಾರದ ಜನ ವಿರೋಧಿ ನೀತಿಗಳನ್ನು ತಿಳಿಸಲು ಅಹೋರಾತ್ರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪೆಟ್ರೋಲ್, ಡೀಸೆಲ್, ಹಾಲು, ಅಡುಗೆ ಎಣ್ಣೆ, ತರಕಾರಿ, ಗ್ಯಾಸ್ ಸೇರಿ ದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ತೆರಿಗೆ ವಿಧಿಸಿ ಬಡ, ಮಧ್ಯಮ ವರ್ಗದ ಜನರ ಜೀವನದ ಜತೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಒಂಬತ್ತು ವರ್ಷಗಳಿಂದ ಹಣದುಬ್ಬರ ಹೆಚ್ಚಾಗಿದೆ. ಬೆಲೆ ಏರಿಕೆಯಿಂದ ಬಡ ಜನರನ್ನು ರಕ್ಷಿಸಲು ಮೋದಿ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬಡ ಜನರಿಗೆ ಪಡಿತರ ನೀಡಲು ಮನಸು ಮಾಡದ ಕೇಂದ್ರ ಸರ್ಕಾರ, ಆಹಾರ ಭದ್ರತೆಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿದೆ. ದೇಶದಲ್ಲಿ ದಿನೇ ದಿನೆ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿದೆ, ಜನರ ನಿಜವಾದ ಆದಾಯ ಕುಸಿಯುತ್ತಿದೆ ಎಂದು ಆರೋಪಿಸಿದರು.
ವೆಚ್ಚಕ್ಕೆ, ಬೆಲೆ ಏರಿಕೆ ತಕ್ಕಂತೆ ಜನರ ವೇತನ ಹೆಚ್ಚಾಗುತ್ತಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ಸ್ವಾಮಿನಾಥನ್ ವರದಿ ಶಿಫಾರಸು ಜಾರಿ ಮಾಡುತ್ತಿಲ್ಲ, ರೈತರು ಉತ್ಪಾದಿಸಿದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡದೆ ರೈತ ವಿರೋಧಿ ಕಾನೂನನ್ನು ಜಾರಿ ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪಿ.ಎ.ವೆಂಕಟೇಶ ಮಾತನಾಡಿ, ಪ್ರಧಾನಿ ಮೋದಿ ಅವರು ಜನರ ಕಷ್ಟಗಳನ್ನು ನೇರವಾಗಿ ಕೇಳದೆ ಮನ್ ಕೀ ಬಾತ್ ಮಾಡಿ ಅವರಷ್ಟಕ್ಕೇ ಅವರೆ ಮಾತನಾಡಿಕೊಳ್ಳುತ್ತಿದ್ದಾರೆ. 9 ವರ್ಷಗಳ ಅಧಿಕಾರಾವಧಿಯಲ್ಲಿ ಇಲ್ಲಿವರೆಗೆ ಒಂದೇ ಒಂದು ಸುದ್ದಿಗೋಷ್ಠಿ ನಡೆಸಿ ಸರ್ಕಾರದ ಸಾಧನೆ ಬಗ್ಗೆ ಹಾಗೂ ಜನರ ಅಹವಾಲು ಸ್ವೀಕರಿಸಿಲ್ಲ. ಹಲವು ದೇಶಗಳಿಗೆ ಪ್ರಧಾನಿ ಮೋದಿ ಹೋಗಿ ಬಂದಿದ್ದಾರೆ ಅದರ ಪ್ರತಿಫಲವೇನು, 20 ಲಕ್ಷ ಕೋಟಿ ರೂ. ಕೋವಿಡ್ ಪರಿಹಾರ ಧನ ಎಲ್ಲಿಗೆ ಹೋಯ್ತು? ಪ್ರಧಾನಿ ಕೇರ್ಸ್ ಫಂಡ್ ಖಾತೆಗೆ ಜನರು ಹಾಕಿದ ದುಡ್ಡಿಗೆ ಲೆಕ್ಕ ನೀಡಿಲ್ಲ. ರೈಲು, ಬ್ಯಾಂಕ್, ಬಂದರು, ಶಿಕ್ಷಣ, ಆರೋಗ್ಯ ಕ್ಷೇತ್ರಗಳನ್ನು ಖಾಸಗೀಕರಣ ಮಾಡಲು ಹೊರಟ್ಟಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net