ಹುಲಿಕುಂಟೆ ಮೂರ್ತಿಯನ್ನು ಟೀಕಿಸಿದ್ದಕ್ಕೆ ಖಂಡನೆ

dbp protest
Published on

ದಲಿತಪರ ಸಂಘಟನೆಗಳಿಂದ ಪ್ರತಿಭಟನೆ

*ರಕ್ಷಣೆ ಕೊಡುವಂತೆ ಒತ್ತಾಯ

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಇತ್ತೀಚೆಗೆ ಉಡಾವಣೆ ಮಾಡಲಾದ ಚಂದ್ರಯಾನ ಉಪಗ್ರಹ ಕುರಿತು ಉಪನ್ಯಾಸಕ ಹುಲಿಕುಂಟೆ ಮೂರ್ತಿ ಸಾಮಾಜಿಕ ಜಾಲತಾಣದಲ್ಲಿ ‘ಚಂದ್ರಯಾನ ಈ ಸಾರಿ ತಿರುಪತಿ ನಾಮವೇ ಗತಿ’ ಎಂದು ಬರೆದುಕೊಂಡಿದ್ದರ ವಿರುದ್ಧ ಹಲವರು ಟೀಕೆ ಮಾಡಿ ತೇಜೋವಧೆ ಮಾಡಿರುವುದು ಖಂಡನೀಯ ಎಂದು ವಿವಿಧ ಸಂಘಟನೆ ಮುಖಂಡರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸರ್ಕಾರಿ ಸಂಸ್ಥೆಗಳು ಧರ್ಮಾತೀತ, ಜಾತ್ಯತೀತವಾಗಿ ಕೆಲಸ ನಿರ್ವಹಿಸಬೇಕು. ವೈಜ್ಞಾನಿಕವಾಗಿ ಕೆಲಸ ಮಾಡುತ್ತಿರುವ ಇಸ್ರೋ 650 ಕೋಟಿ ರೂ.ಖರ್ಚು ಮಾಡಿ ಚಂದ್ರಯಾನ ಉಪಗ್ರಹ ಉಡಾವಣೆ ಮಾಡಿದೆ. ಆದರೆ ಮೂಢನಂಬಿಕೆ ತೊಲಗಿಸಬೇಕಾದವರೇ ದೇವರ ಮೊರೆ ಹೋದದ್ದು ಸರಿಯಲ್ಲ ಎಂದು ಮೂರ್ತಿ ಸೂಕ್ಷ್ಮವಾಗಿ ತಿಳಿಸಿದ್ದಾರೆ. ಇದನ್ನೇ ತಪ್ಪು ಎಂದು ಕೆಲವರು ಸಾಮಾಜಿಕ ಜಾಲತಾಣಲ್ಲಿ ವೈಯಕ್ತಿಕವಾಗಿ ನಿಂದಿಸಿದ್ದಾರೆ ಎಂದು ಕನ್ನಡ ಜಾಗೃತಿ ಪರಿಷತ್ ಅಧ್ಯಕ್ಷ ಕೆ.ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಮೌಢ್ಯತೆ ಜಾರಿಯಲ್ಲಿರುವ ಬಗ್ಗೆ ಹುಲಿಕುಂಟೆ ಮೂರ್ತಿ ಟೀಕಿಸಿದ್ದಾರೆ, ಇದಕ್ಕೆ ಬೇರೆ ಅರ್ಥ ಕೊಡಬೇಕಿಲ್ಲ ಎಂದು ಕನ್ನಡಪರ ಹೋರಾಟಗಾರ ಸಂಜೀವನಾಯಕ್ ಹೇಳಿದರು.
ಠಾಣೆಯಲ್ಲಿ ದೂರು ದಾಖಲು:
ಮೂರ್ತಿ ಅವರಿಗೆ ಹಲವು ಕಿಡಿಗೇಡಿಗಳು ಜೀವ ಬೆದರಿಕೆ ಒಡ್ಡಿರುವುದರಿಂದ ಸರ್ಕಾರ ಭದ್ರತೆ ನೀಡಬೇಕು ದಲಿತ ಮುಖಂಡ ಗುರುರಾಜಪ್ಪ ಆಗ್ರಹಿಸಿದರು. ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ 30 ಮಂದಿ ವಿರುದ್ಧ ದೂರು ದಾಖಲಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net