ಸಮರ್ಪಕ ವಿದ್ಯುತ್ ಪೂರೈಕೆಗೆ ರೈತರ ಒತ್ತಾಯ

dbp power problem
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ.
ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ಫೀಡರ್-8ರ ವ್ಯಾಪ್ತಿಗೆ ಬರುವ ಸುಮಾರು 8 ಗ್ರಾಮಗಳ ರೈತರು ಶುಕ್ರವಾರ ನಗರದ ಬೆಸ್ಕಾಂ ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಕಚೇರಿಯಲ್ಲಿ ಎಇಇ ಇನಾಯತ್ ಉಲ್ಲಾಖಾನ್ ಅವರಿಗೆ ಮನವಿ ಸಲ್ಲಿಸಿದರು.
ರೈತರಿಗೆ ತ್ರೀ ಫೇಸ್‌ಗಳಲ್ಲಿ 7 ಗಂಟೆ ವಿದ್ಯುತ್ ಪೂರೈಸುವಂತೆ ಸರ್ಕಾರ ಆದೇಶ ಮಾಡಿದೆ. ಆದರೆ, ಬೆಸ್ಕಾಂ ಅಧಿಕಾರಿಗಳು ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಕಳೆದ 15 ದಿನಗಳಿಂದ ವಿದ್ಯುತ್ ವ್ಯತ್ಯಯದಿಂದಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಳೆ ಕೊರತೆ ನಡುವೆ ವಿದ್ಯುತ್ ಅಭಾವದಿಂದ ರೈತರು ಬೆಳೆ ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಡಿ-ಕ್ರಾಸ್ ನಿಂದ ಹಾಡೋನಹಳ್ಳಿವರೆಗೆ ಫೀಡರ್-8 ಮಾರ್ಗವಿದೆ. ಅನಿಯಮಿತ ವಿದ್ಯುತ್ ಸರಬರಾಜಿನ ಕಾರಣ, ತಿರುಮಗೊಂಡನಹಳ್ಳಿ, ವಡ್ಡರಹಳ್ಳಿ, ಮಲ್ಲಾತಹಳ್ಳಿ, ಗಂಗಸಂದ್ರ, ಹಾಡೋನಹಳ್ಳಿ ಹಾಗೂ ಎಸ್.ನಾಗೇನಹಳ್ಳಿ ರೈತರಿಗೆ ತೊಂದರೆಯಾಗಿದೆ. ಕೂಡಲೇ ಸಮಸ್ಯೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ತ್ರೀ ಫೇಸ್ ವಿದ್ಯುತ್ ಪೂರೈಕೆಯಲ್ಲಿ ಎರಡ್ಮೂರು ಬಾರಿ ವಿದ್ಯುತ್ ಕಡಿತವಾಗುತ್ತಿದೆ. ಇದರಿಂದ ಸಾಕಷ್ಟು ಪಂಪ್‌ಸೆಟ್ ಗಳು ಸುಟ್ಟು ಹೋಗುತ್ತಿವೆ. ಮೊದಲೇ ವಿದ್ಯುತ್ ಕಡಿತದಿಂದ ತೊಂದರೆ ಅನುಭವಿಸುತ್ತಿರುವ ರೈತರು, ಪಂಪ್‌ಸೆಟ್ ದುರಸ್ಥಿಗೂ ಹಣ ಖರ್ಚು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅಳಲು ತೋಡಿಕೊಂಡರು.
ಗ್ರಾಮೀಣ ಉಪ ವಿಭಾಗದ ಎಇಇ ಇನಾಯತ್ ಉಲ್ಲಾಖಾನ್ ಮನವಿ ಸ್ವೀಕರಿಸಿ ಮಾತನಾಡಿ, 20 ದಿನಗಳಿಂದ ಜಲವಿದ್ಯುತ್, ಪವನಶಕ್ತಿ ಉತ್ಪಾದನೆ ಕಡಿಮೆಯಾಗಿದೆ. ಹಾಗಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಮುಂದಿನ ವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net