

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದಶಕಗಳಿಂದ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ದೊಡ್ಡಬಳ್ಳಾಪುರದ ಮೇಲೆ ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿ ಹಿಡಿತ ಸಾಧಿಸಿದೆ. ರಾಜ್ಯ ಹಾಗೂ ರಾಷ್ಟ್ರನಾಯಕರೂ ಎಡತಾಕುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ನಿರ್ಣಾಯ ಪಾತ್ರ ವಹಿಸಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ.
ಮೈತ್ರಿ ಸರ್ಕಾರದ ಪತನದ ಬಳಿಕ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದ ಬಿಜೆಪಿ, ದೊಡ್ಡಬಳ್ಳಾಪುರಕ್ಕೆ ಹೆಚ್ಚು ಒತ್ತು ನೀಡಿತ್ತು. ಜಿಲ್ಲೆಯ ನಾಲ್ಕೂ ತಾಲೂಕುಗಳ ಪೈಕಿ ದೊಡ್ಡಬಳ್ಳಾಪುರದಲ್ಲಿ ಹೆಚ್ಚೆಚ್ಚು ರಾಜಕೀಯ ಕಾರ್ಯಕ್ರಮ ನಡೆಸಿತ್ತು. ಜಿಲ್ಲೆಯ ಉಸ್ತುವಾರಿ ವಹಿಸಿದ್ದ ಅಂದಿನ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ದೊಡ್ಡಬಳ್ಳಾಪುರದಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ಕರೊನಾ ಕಾಲಘಟ್ಟದಲ್ಲಿ ಮೇಕ್ ಇನ್ ಆಸ್ಪತ್ರೆ ನಿರ್ಮಾಣ ಸೇರಿ ಕರೊನಾ ನಿರ್ವಹಣೆಯಲ್ಲೂ ಹೆಚ್ಚು ಪ್ರಾಶಸ್ತ್ಯ ನೀಡಲಾಗಿತ್ತು.
ಜನೋತ್ಸವದ ಮೂಲಕ ಪ್ರಚಲಿತ: ಈ ಹಿಂದೆ ನೆಲಮಂಗಲ ಹಾಗೂ ದೇವನಹಳ್ಳಿ ಜೆಡಿಎಸ್ ತೆಕ್ಕೆಯಲ್ಲಿದ್ದರೆ, ದೊಡ್ಡಬಳ್ಳಾಪುರ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಹೊಸಕೋಟೆ ಬಿಜೆಪಿ, ಕಾಂಗ್ರೆಸ್ ನಡುವೆ ಬಲಪ್ರದರ್ಶನ ನಡೆಯುತ್ತಿತ್ತು. ಬಿಜೆಪಿಗೆ ನೆಲೆ ಇಲ್ಲದ ಜಿಲ್ಲೆಯಲ್ಲಿ ಅದರಲ್ಲೂ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಹಿಡಿತ ಸಾಧಿಸಲು ವರಿಷ್ಠರು ಸಾಕಷ್ಟು ಬೆವರು ಹರಿಸಿದ್ದರು. ಏನತ್ಮಧ್ಯೆ ವಿಧಾನಸಭಾ ಚುನಾವಣೆ ವೇಳೆ ದೊಡ್ಡಮಟ್ಟದಲ್ಲಿ ಆಯೋಜಿಸಿದ್ದ ‘ಜನೋತ್ಸವ’ಕ್ಕೆ ವ್ಯಕ್ತವಾದ ಅಭೂತಪೂರ್ವ ಸ್ಪಂದನೆ ರಾಜ್ಯ ಬಿಜೆಪಿ ನಾಯಕರಾದಿಯಾಗಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿತ್ತು. ಹಾಲಿ ಶಾಸಕ ಧೀರಜ್ ಮುನಿರಾಜು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಎರಡು ಬಾರಿ ಬೇರೆ ಬೇರೆ ಕಾರಣಕ್ಕೆ ಅಂತಿಮ ಗಳಿಗೆಯಲ್ಲಿ ಕಾರ್ಯಕ್ರಮ ರದ್ದಾದರೂ ಮೂರನೇ ಬಾರಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಸುವ ಮೂಲಕ ಪ್ರತಿಪಕ್ಷಗಳ ವಿರುದ್ಧ ಬಲಪ್ರದರ್ಶನಕ್ಕೆ ವೇದಿಕೆಯಾಗಿತ್ತು. ಈ ಕಾರ್ಯಕ್ರಮ ಮುಂದಿನ ವಿಧಾನಸಭಾ ಚುನಾವಣೆ ಲಿತಾಂಶದ ದಿಕ್ಸೂಜಿಯಾಗಲಿದೆ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿತ್ತು. ಅದೂ ನಿಜವೂ ಆಯಿತು. ಎರಡು ಬಾರಿ ಕಾಂಗ್ರೆಸ್‌ನಿಂದ ಗೆಲುವು ಕಂಡಿದ್ದ ವೆಂಕಟರಮಣ್ಯ ವಿರುದ್ಧ ಬಿಜೆಪಿಯ ಧೀರಜ್ ಮುನಿರಾಜು ನಿರಾಯಾಸವಾಗಿ ಗೆಲುವಿನ ದಡ ಸೇರಿದರು.
ನಿರ್ಣಾಯಕ ಪಾತ್ರ: ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕೂ ತಾಲೂಕುಗಳು ನಿರ್ಣಾಯಕ ಪಾತ್ರ ವಹಿಸಲಿವೆ. ಆದರೆ ಚಿಕ್ಕಬಳ್ಳಾಪುರ ಹಾಗೂ ಗ್ರಾಮಾಂತರ ಜಿಲ್ಲೆಯ ಅಷ್ಟೂ ಕ್ಷೇತ್ರಗಳ ಪೈಕಿ ದೊಡ್ಡಬಳ್ಳಾಪುರ ಒಂದರಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಆದ್ದರಿಂದ ಬಿಜೆಪಿ ಮುಖಂಡರಿಗೆ ಈ ಕ್ಷೇತ್ರ ದೊಡ್ಡ ಮತಪೆಟ್ಟಿಗೆಯಾಗಿದೆ. ಹೊಸಕೋಟೆಯಲ್ಲಿ ಬಿಜೆಪಿಯಿಂದ ಮಾಜಿ ಸಚಿವ ಎಂಟಿಬಿ ನಾಗರಾಜ್ ಇದ್ದರೂ ಇತ್ತೀಚೆಗೆ ರಾಜಕೀಯವಾಗಿ ಸಕ್ರಿಯವಾಗಿಲ್ಲ. ಇದರ ಮಧ್ಯೆ ಶಾಸಕ ಶರತ್‌ಬಚ್ಚೇಗೌಡ ಪ್ರಭಾವಿಯಾಗಿರುವುದರಿಂದ ಹೊಸಕೋಟೆ ಮೇಲೆ ಬಿಜೆಪಿ ವರಿಷ್ಠರಿಗೆ ಹೆಚ್ಚು ನಿರೀಕ್ಷೆ ಇಲ್ಲ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಯುವುದರಿಂದ ನೆಲಮಂಗಲ ಹಾಗೂ ದೇವನಹಳ್ಳಿಯ ಜೆಡಿಎಸ್ ಮಾಜಿ ಶಾಸಕರ ಬೆಂಬಲದ ನಿರೀಕ್ಷೆಯಷ್ಟೇ ಇದೆ.
ಗ್ರಾಮ ಚಲೋ ವರ್ಚಸ್ಸು: ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಬಿಜೆಪಿಯ ಗ್ರಾಮಚಲೋ ಕಾರ್ಯಕ್ರಮ ತಾಲೂಕಿನಲ್ಲಿ ಹೆಚ್ಚು ಚುರುಕು ಪಡೆದಿದೆ. ರಾಜ್ಯ ಸರ್ಕಾರದ ವಿರುದ್ಧ ಜಿಲ್ಲೆಯಲ್ಲಿ ಯಾವುದೇ ಪ್ರತಿಭಟನೆ ಹೋರಾಟಕ್ಕೂ ದೊಡ್ಡಬಳ್ಳಾಪುರವನ್ನೇ ಕೇಂದ್ರಸ್ಥಾನವಾಗಿ ಬಳಸಿಕೊಳ್ಳಲಾಗುತ್ತಿದೆ. ಪ್ರತಿಪಕ್ಷ ನಾಯಕ ಆರ್.ಅಶೋಕ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಪಕ್ಷದ ಮುಖಂಡರು ತಾಲೂಕಿನಲ್ಲಿ ಬಿಜೆಪಿಯನ್ನು ಮತ್ತಷ್ಟು ಸಂಘಟಿಸಲು ಹೆಚ್ಚೇ ಶ್ರಮಿಸುತ್ತಿರುವುದು ಕಂಡುಬರುತ್ತಿದೆ.
ಮಾಜಿ ಶಾಸಕರ ವಿರೋಧಿ ಅಲೆ; ಕಾಂಗ್ರೆಸ್‌ನಿಂದ ಎರಡು ಬಾರಿ ಶಾಸಕರಾಗಿದ್ದ ವೆಂಕಟರಮಣಯ್ಯ ಸ್ವಪಕ್ಷೀಯರಿಂದಲೇ ಅಂತರ ಕಾಯ್ದುಕೊಂಡಿದ್ದರು. ಚುನಾವಣೆ ವೇಳೆ ಉಚ್ಚಾಟನೆ ಅಸ ಬಳಸಿ ಪ್ರಮುಖ ಮುಖಂಡರನ್ನು ದೂರ ಮಾಡಿಕೊಂಡಿದ್ದರು. ಚುನಾವಣೆ ಸೋಲಿನ ಬಳಿಕ ಮಾಜಿ ಶಾಸಕರು ರಾಜಕೀಯವಾಗಿ ಅಷ್ಟೇನು ಸಕ್ರಿಯರಾಗಿಲ್ಲ. ಇದರಿಂದ ಬಿಜೆಪಿ ಪಾಲಿಗೆ ದೊಡ್ಡಬಳ್ಳಾಪುರ ರಾಜಕೀಯ ಕೇಂದ್ರಬಿಂದುವಾಗಿದೆ.