

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ನಗರದಲ್ಲಿನ ಬಡವರು, ಕೂಲಿ ಕಾರ್ಮಿಕರು, ನೇಕಾರರು ಹಾಗೂ ನಿತ್ಯ ಪಟ್ಟಣಕ್ಕೆ ಹಳ್ಳಿಯಿಂದ ವಿವಿಧ ಕೆಲಸಗಳಿಗೆ ಬರುವ ಜನರಿಗಾಗಿ ಕಡಿಮೆ ದರದಲ್ಲಿ ನೀಡುವ ಉದ್ದೇಶದಿಂದ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಕನ್ನಡಿಗರ ರಕ್ಷಣಾ ವೇದಿಕೆ ಕನ್ನಡಿಗರ ಬಣದ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಹೇಳಿದರು.
ಪಟ್ಟಣದ ಕನ್ನಡ ಜಾಗೃತ ಭವನದ ಬಳಿ ಕನ್ನಡಿಗರ ರಕ್ಷಣಾ ವೇದಿಕೆದಿಂದ ರಿಯಾಯಿತಿ ದರದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದರು. ಅದೆಷ್ಟೋ ಜನರು ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇದೆ. ಇದನ್ನು ಮನಗಂಡು ಗುಣಮಟ್ಟದ ಆಹಾರವನ್ನು 30 ರೂ. ದರದಲ್ಲಿ ಎರಡು ಚಪಾತಿ, ಅನ್ನ-ಸಾರು, ಪಲ್ಯ, ಮಜ್ಜಿಗೆ ನೀಡಲಾಗುತ್ತಿದೆ ಎಂದರು.
ಅಡುಗೆ ಜವಾಬ್ದಾರಿ ವಹಿಸಿಕೊಂಡಿರುವ ಖಜಾಂಚಿ ಚೇತನ್ ಗೌಡ ಮಾತನಾಡಿ, ಇಂದಿನ ಆಹಾರ ಪದ್ಧತಿಯಿಂದಾಗಿ ಯುವ ಜನ ಸೇರಿದಂತೆ ಪ್ರತಿಯೊಬ್ಬರೂ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಕನಿಷ್ಠ ಹಣಕ್ಕೆ ಸಾರ್ವಜನಿಕರಿಗೆ ಉತ್ತಮ ಗುಣಮಟ್ಡದ ಆಹಾರ ನೀಡಬೇಕು ಎಂಬ ಕಾರಣಕ್ಕೆ ಇಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಲಾಭಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ಹಸಿದವರ ಹೊಟ್ಟೆ ತುಂಬಿಸಲು ಈ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.