ಮಧ್ಯವರ್ತಿಗಳನ್ನು ಸರ್ಕಾರಿ ಕಚೇರಿಗಳಿಂದ ದೂರವಿಡಿ

dbp kannda party protest
Published on

ನಗರಸಭೆ ದುರಾಡಳಿತ ಖಂಡಿಸಿ ಕನ್ನಡ ಪಕ್ಷ ಪ್ರತಿಭಟನೆ


ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ.
ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಯ ಬಳಿ ಪ್ರಶ್ನೆ ಮಾಡುವ ಪ್ರವೃತ್ತಿಯನ್ನು ಸಾರ್ವಜನಿಕರು ಬೆಳೆಸಿಕೊಳ್ಳಬೇಕು ಎಂದು ಕನ್ನಡ ಜಾಗೃತಿ ಪರಿಷತ್ ಅಧ್ಯಕ್ಷ ಕೆ.ವೆಂಕಟೇಶ್ ಹೇಳಿದರು.
ನಗರದಲ್ಲಿ ನಗರಸಭೆಯ ದುರಾಡಳಿತ ವಿರೋಧಿಸಿ ಕನ್ನಡ ಪಕ್ಷದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಸರ್ಕಾರಗಳು ಅಧಿಕಾರ ವಿಕೇಂದ್ರೀಕರಣಕ್ಕಾಗಿ ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ ಆರಂಭಿಸಿದೆ. ಆದರೆ ಜನಸಾಮಾನ್ಯರ ಅಲೆದಾಟ ತಪ್ಪಿಸಬೇಕಾದ ಸ್ಥಳೀಯ ಆಡಳಿತಗಳು ಬಡ ಜನರ ರಕ್ತ ಹಿರುವ ಮಾದರಿಯಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿವೆ. ಅಧಿಕಾರಿಗಳ ಬಳಿ ಜನಸಾಮಾನ್ಯರು ಕೈಕಟ್ಟಿ ಕೇಳುವುದೇ ತಪ್ಪು ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಮಧ್ಯವರ್ತಿಗಳು, ಏಜೆಂಟ್‌ಗಳನ್ನು ಸರ್ಕಾರಿ ಕಚೇರಿಗಳಿಂದ ದೂರ ಇಡಬೇಕು. ನಗರಸಭೆ, ತಾಲೂಕು ಕಚೇರಿಯಲ್ಲಿ ವಾರಕ್ಕೊಮ್ಮೆ ಸಾರ್ವಜನಿಕ ಅಹವಾಲು ಸ್ವೀಕರಿಸಿ, ಪರಿಹಾರಕ್ಕೆ ಕ್ರಮ ಕೈಗೊಳ್ಳುವ ವ್ಯವಸ್ಥೆ ಆಗಬೇಕು. ನಗರಸಭೆಯಲ್ಲಿ 15ರಿಂದ 20 ವರ್ಷಗಳಿಂದ ಠಿಕಾಣಿ ಹೂಡಿ, ಭ್ರಷ್ಟಾಚಾರದಲ್ಲಿ ತೊಡಗಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.
ಕನ್ನಡ ಪಕ್ಷದ ಹಿರಿಯ ಮುಖಂಡ ಸಂಜೀವ ನಾಯಕ್ ಮಾತನಾಡಿ, ಜನ ಸಾಮಾನ್ಯರಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ನಗರಸಭೆ ವಿಫಲವಾಗಿದೆ. ಸೇವೆ ಪಡೆಯಲು ಲಂಚಕ್ಕೆ ನೀಡುವಂತಾಗಿದೆ. ಅನೇಕ ವರ್ಷಗಳಿಂದ ಯಾವುದೇ ವಸತಿ ಯೋಜನೆಗಳನ್ನು ನಗರಸಭೆ ಜಾರಿಗೆ ತಂದಿಲ್ಲ ಎಂದರು.
ಕಾನೂನಾತ್ಮಕವಾಗಿರುವ ಖಾತೆಗಳನ್ನು ಲಂಚ ಪಡೆಯದೆ ಅರ್ಹರಿಗೆ ನೀಡಬೇಕು. ಸಾರ್ವಜನಿಕರಿಂದ ಸೌಜನ್ಯದಿಂದ ವರ್ತಿಸಬೇಕು. ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಚಿದಾನಂದ, ರಂಗನಾಥ, ಜಿ.ರಾಮು, ನಾಗರಾಜು, ಮುದ್ದುಕೃಷ್ಣ, ಆಟೋ ಮಂಜುನಾಥ, ಪ್ರಜಾ ವಿಮೋಚನಾ ಸಂಘಟನೆ ಸದಸ್ಯ ಗೂಳ್ಯ ಹನುಮಣ್ಣ, ಗಂಗಾಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net