ದೊಡ್ಡಬಳ್ಳಾಪುರ ಆಸ್ಪತ್ರೆಗೆ ಬೇಕು ಸೌಕರ್ಯ

ದೊಡ್ಡಬಳ್ಳಾಪುರ ಆಸ್ಪತ್ರೆಗೆ ಬೇಕು ಸೌಕರ್ಯ
Published on

ಸವಾಲಿನ ನಡುವೆ ಸೇವೆ - ವಾರಕ್ಕೊಮ್ಮೆ ಬರುವ ಲ್ಯಾಪ್ರೋಸ್ಕೊಪಿಕ್ ಉಪಕರಣ - ರೋಗಿಗಳು ಹೈರಾಣ

ವೆಂಕಟರಾಜು ಎಸ್. ದೊಡ್ಡಬಳ್ಳಾಪುರ: ಪ್ರತಿದಿನ ಕನಿಷ್ಠ 800 ಹೊರರೋಗಿಗಳಿಗೆ ಚಿಕಿತ್ಸೆ ನೀಡುವ, ತಿಂಗಳಿಗೆ 250ಕ್ಕೂ ಹೆರಿಗೆ ಪ್ರಕರಣ ನಿಭಾಯಿಸುವ ದೊಡ್ಡಬಳ್ಳಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆ ಮೂಲಸೌಕರ್ಯ ಕೊರತೆಯಿಂದ ಬಳಲುತ್ತಿದೆ. ಜಿಲ್ಲಾಸ್ಪತ್ರೆಯೊಂದು ನಿಭಾಯಿಸಬಹುದಾದಷ್ಟು ಆರೋಗ್ಯ ಸೇವೆ ನೀಡುತ್ತಿರುವ ಈ ಆಸ್ಪತ್ರೆಗೆ ಅವಶ್ಯಕವಿರುವ ವೈದ್ಯಕೀಯ ಉಪಕರಣ, ಸಿಬ್ಬಂದಿ, ಆಂಬುಲೆನ್ಸ್ ಮತ್ತಿತರ ಸೌಲಭ್ಯಗಳಿಲ್ಲದಿರುವುದು ತಾಲೂಕಿನ

ಜನರ ಬೇಸರಕ್ಕೆ ಕಾರಣವಾಗಿದೆ.

ತಾಲೂಕಿನಲ್ಲಿ ಹಾದು ಹೋಗಿ ರುವ ಎಸ್‌ಟಿಆರ್‌ಆರ್ ರಸ್ತೆ ಮತ್ತು ರಾಜ್ಯ ಹೆದ್ದಾರಿ ಗಳಲ್ಲಿ ಇತ್ತೀಚೆಗೆ ಪ್ರತಿನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಲೇ ಇವೆ. ಆಪತ್ಕಾಲದಲ್ಲಿ ಕಾರ್ಯ ನಿರ್ವಹಿಸುವ ಜೀವ ರಕ್ಷಕ ಆಂಬುಲೆನ್ಸ್ ಗಳು ಇರುವುದು ಕೇವಲ 4. ಈ ಹಿಂದೆ 5 ಆಂಬುಲೆನ್ಸ್ ಗಳಿದ್ದಾಗ ದೊಡ್ಡಬೆಳವಂಗಲದ ವಾಹನವನ್ನು ನೆಲಮಂಗಲಕ್ಕೆ ವರ್ಗಾಯಿಸಲಾಗಿದೆ. ಸಾಸಲು, ಘಾಟಿ, ಮಧುರೆ, ದೊಡ್ಡಬಳ್ಳಾಪುರ ನಗರ ಆಸ್ಪತ್ರೆಗಳಲ್ಲಿ ಆಂಬುಲೆನ್ಸ್ ಗಳಿವೆ. ರೋಗಿಗಳ ಸಂಖ್ಯೆ ಆಧಾರದ ಮೇಲೆ ತಾಲೂಕಿನ ಬಾಶೆಟ್ಟಿಹಳ್ಳಿ ಮತ್ತು ದೊಡ್ಡಬಳ್ಳಾಪುರ ನಗರಕ್ಕೆ ಮತ್ತೆರಡು ಆಂಬುಲೆನ್ಸ್‌ಗಳು ಅಗತ್ಯವಾಗಿದೆ. ಈ

ಮಧ್ಯೆ ಖಾಸಗಿ ಆಂಬುಲೆನ್ಸ್‌ಗಳ ಹಾವಳಿ ಹೆಚ್ಚಾಗಿವೆ.

ತಿಂಗಳಿಗೆ 250ಕ್ಕೂ ಹೆಚ್ಚು ಹೆರಿಗೆ: ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಸೇರಿ ಸುತ್ತಮುತ್ತಲಿನ ಯಾವುದೇ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ತಿಂಗಳಿಗೆ 100 ಹೆರಿಗೆ ಪ್ರಕರಣ ದಾಖಲಾಗುವುದು ಕಷ್ಟಕರ. ಆದರೆ ದೊಡ್ಡಬಳ್ಳಾಪುರ ತಾಲೂಕು ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಕನಿಷ್ಠ 250ಕ್ಕೂ ಹೆಚ್ಚು ಹೆರಿಗೆ ಪ್ರಕರಣ ದಾಖಲಾಗುತ್ತಿವೆ. ಜತೆಗೆ ತಿಂಗಳಿಗೆ 15-20 ಗರ್ಭಕೋಶದ ಗಡ್ಡೆ ತೆಗೆಯುವ ಚಿಕಿತ್ಸೆ, ಗರ್ಭಕೋಶದ ಮರುಜೋಡಣೆ, ಗರ್ಭಕೋಶದ ಕ್ಯಾನ್ಸರ್ ಪತ್ತೆ ಚಿಕಿತ್ಸೆ ಮಾಡಲಾಗುತ್ತಿದೆ.

ಎಂಆರ್‌ಐ ಕೊರತೆ: ಅಪಘಾತದ ಸಂದರ್ಭದಲ್ಲಿ ಮೂಳೆ ಮುರಿತ, ತಲೆಗೆ ಪೆಟ್ಟು ಸೇರಿ ದೇಹದ ಒಳಗಿನ ಸಮಸ್ಯೆಗಳನ್ನು ಪರೀಕ್ಷಿಸಲು ಬೇಕಿರುವ ಸಿಟಿ ಸ್ಕ್ಯಾನಿಂಗ್ ಮಷಿನ್, ಎಂಆರ್‌ಐ ಮಷಿನ್ ಇಲ್ಲವೇ ಇಲ್ಲ. ಇನ್ನು ಇತ್ತೀಚೆಗೆ ಯುವ ಜನತೆಯಲ್ಲೂ ಹೆಚ್ಚಾಗುತ್ತಿರುವ ಹೃದಯ ಸಂಬಂಧಿ ಚಿಕಿತ್ಸೆಗಳ ಪರೀಕ್ಷೆಗೆ ಬೇಕಾಗುವ ಇಕೊ ಕಾರ್ಡಿಯೋಗ್ರಫಿ, ಆಂಜಿಯೊಗ್ರಾಫಿ ಮಷಿನ್ ಗಳೂ ಇಲ್ಲವಾಗಿದೆ. ಕ್ಯಾನ್ಸರ್ ತಪಾಸಣಾ ಕೇಂದ್ರವೂ ಇಲ್ಲ.

ಬ್ಲಡ್ ಬ್ಯಾಂಕ್ ಆಗಲೇ ಇಲ್ಲ: ಪ್ರತಿನಿತ್ಯ ತಾಲೂಕಿನ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಕನಿಷ್ಠ 10 ಯೂನಿಟ್ ರಕ್ತದ ಅವಶ್ಯಕತೆ ಎದುರಾಗುತ್ತಿದೆ. ಪ್ರತಿ ಯೂನಿಟ್‌ಗೂ ಬೆಂಗಳೂರನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಹಲವು ವರ್ಷಗಳಿಂದ ಬ್ಲಡ್ ಬ್ಯಾಂಕ್ ನಿರ್ಮಾಣ ಮಾಡುವುದಾಗಿ ಆರೋಗ್ಯ ಇಲಾಖಾಧಿಕಾರಿಗಳು ಹೇಳುತ್ತಲೇ ಇದ್ದಾರೆ. ಆದರೆ ಜೀವ ಹನಿ ಮಾತ್ರ ದೂರದ ಮಾತಾಗಿಯೇ ಉಳಿದಿದೆ.

ಕ್ರಿಟಿಕಲ್ ಕೇರ್ ಯುನಿಟ್ ಮರೀಚಿಕೆ: ಪ್ರತಿದಿನ ಸಾವಿರಾರು ಮಂದಿ ರೋಗಿಗಳು ಬಂದು ಹೋಗುವ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಒಳಗೊಂಡಂತೆ ಕ್ರಿಟಿಕಲ್ ಕೇರ್ ಯುನಿಟ್ ಇಲ್ಲವಾಗಿದೆ. ಆಸ್ಪತ್ರೆ ಆರಂಭವಾದಾಗಿನಿಂದಲೂ ಕೇಳುತ್ತಿದ್ದರೂ ಈವರೆಗೆ ಬರಲೇ ಇಲ್ಲ.

ವಾರಕ್ಕೊಮ್ಮೆ ನಡೆಯಲಿವೆ ಶಸ ಚಿಕಿತ್ಸೆ : ಮಹಿಳೆಯರಿಗೆ ಕುಟುಂಬ ಕಲ್ಯಾಣ ಶಸಚಿಕಿತ್ಸೆ( ಮಕ್ಕಳು ಆಗದಂತೆ ಮಾಡುವ ಆಪರೇಷನ್) ಮಾಡಲು ವೈದ್ಯರಿದ್ದರೂ ಆಪರೇಷನ್ ಮಾಡಲು ಬೇಕಿರುವ ಲ್ಯಾಪ್ರೋಸ್ಕೊಪಿಕ್ ಮಷಿನ್ ಆಸ್ಪತ್ರೆಯಲ್ಲಿ ಇಲ್ಲ. ದೇವನಹಳ್ಳಿಯಿಂದ ಪ್ರತಿ ಗುರುವಾರ ಇಲ್ಲಿಗೆ ರವಾನೆ ಮಾಡಲಾಗುತ್ತದೆ. ಹಾಗಾಗಿ ವಾರಕ್ಕೊಮ್ಮೆ ಶಸ್ತ್ರಚಿಕಿತ್ಸೆಗಳು ನಡೆಯುತ್ತಿವೆ.

ಜಿಲ್ಲಾಸ್ಪತ್ರೆ ಕಾಮಗಾರಿಗೆ ಸಿಗಲಿ ಚಾಲನೆ: ಇಷ್ಟೊಂದು ಅಗತ್ಯತೆಗಳ ಮಧ್ಯೆಯೂ ಯಶಸ್ವಿಯಾಗಿ ಕಾರ್ಯನಿರ್ಹಹಿಸುತ್ತಿರುವ ತಾಲೂಕು ಆಸ್ಪತ್ರೆಯಲ್ಲಿ ಪ್ರತಿದಿನ ಜಿಲ್ಲಾಸ್ಪತ್ರೆಯಲ್ಲಿರುವಷ್ಟು ಕೆಲಸದ ಒತ್ತಡ, ಒಳ ಮತ್ತು ಹೊರ ರೋಗಿಗಳಿಗೆ ಚಿಕಿತ್ಸೆ, ವಿವಿಧ ಶಸ್ತ್ರ ಚಿಕಿತ್ಸೆಗಳು ನಡೆಯುತ್ತಿವೆ. ಹೀಗಾಗಿ ತಾಲೂಕಿಗೆ ಮಂಜೂರಾಗಿರುವ ಜಿಲ್ಲಾಸ್ಪತ್ರೆ ಯೋಜನೆಗೆ ಕಳೆದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೂಮಿ ಪೂಜೆ ನೇರವೇರಿಸಿದ್ದರು. ಆದರೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಶೀಘ್ರ ಚಾಲನೆ ನೀಡಬೇಕಾಗಿದೆ. ಇನ್ನು ತಾಲ್ಲೂಕಿನಲ್ಲಿ ಸರ್ಕಾರಿ ಪ್ಯಾರಮೆಡಿಕಲ್, ನಸಿರ್ಂಗ್ , ಮೆಡಿಕಲ್ ಕಾಲೇಜು ದೂರದ ಮಾತಾಗಿದೆ.ತೀವ್ರ ನಿಗಾ ಘಟಕ ಇಲ್ಲ: ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹೆರಿಗೆಗಳು ನಡೆಯುತ್ತಿರುವ ಆಸ್ಪತ್ರೆಯಲ್ಲಿ ನವಜಾತ ಶಿಶುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕಡಿಮೆ ತೂಕ, ಉಸಿರಾಟದ ಸಮಸ್ಯೆ, ಸೋಂಕು, ಜಾಂಡೀಸ್ ಇತ್ಯಾದಿ ಚಿಕಿತ್ಸೆಗಳಿಗೆ ಅಗತ್ಯವಾಗಿರುವ ಎನ್‌ಎಸ್‌ಯುಐ ಘಟಕ (ನವಜಾತ ಶಿಶುಗಳ ತೀವ್ರ ನಿಗಾ ಘಟಕ) ಇಲ್ಲ. ಹೆರಿಗೆ ನಂತರ ತಾಯಿ ಆರೋಗ್ಯದಲ್ಲಿ ಏರುಪೇರಾದರೆ ಚಿಕಿತ್ಸೆ ನೀಡಲು ತೀವ್ರ ನಿಗಾ ಘಟಕವೂ ಇಲ್ಲ. ಇಂತಹ ಸಮಯದಲ್ಲಿ ಬೆಂಗಳೂರಿನ ವಾಣಿವಿಲಾಸ್ ಮತ್ತು ಇಂದಿರಾಗಾಂಧಿ ಆಸ್ಪತ್ರೆಯೇ ಗಟ್ಟಿ. ತಾಲೂಕು ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸಬೇಕಾದ ಲ್ಯಾಬ್ ಕೂಡ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net