ಸಹಕಾರ ಸಂಘಗಳು ಗ್ರಾಮೀಣರ ಜೀವನಾಡಿ

doddaballapura building ingration
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಸಹಕಾರ ಸಂಘಗಳು ಗ್ರಾಮೀಣರ ಉಸಿರಾಗಿದ್ದು ಅವುಗಳನ್ನು ಉಳಿಸಿ, ಬೆಳೆಸಲು ನಾವೆಲ್ಲರೂ ಜವಾಬ್ದಾರಿ ಹೊರಬೇಕು ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ತಾಲೂಕಿನ ಕಸಬಾ ಹೋಬಳಿಯ ಎಸ್.ಎಂ ಗೊಲ್ಲಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಮೊದಲ ಅಂತಸ್ತಿನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಕ್ಕೆ ಸರಿ ಸಮನಾಗಿ ಸಹಕಾರಿ ಸಂಘಗಳಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಡಿಸಿಸಿ ಬ್ಯಾಂಕ್, ಪಿಎಲ್‌ಡಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್, ಹಾಲು ಉತ್ಪಾದಕರ ಸಹಕಾರ ಸಂಘ, ವ್ಯವಸಾಯ ಸೇವಾ ಸಹಕಾರ ಸಂಘಗಳು ಜನರ ಶ್ರೇಯೋಭಿವೃದ್ಧಿಗೆ ಕೆಲಸ ಮಾಡುತ್ತಿವೆ. ನನ್ನ ಅವಧಿಯಲ್ಲಿಯೂ ಅಗತ್ಯವಿರುವ ಎಂಪಿಸಿಎಸ್‌ಗಳಿಗೆ ಅನುದಾನ ಬಿಡುಗಡೆ ಮಾಡಿ ರೈತರಿಗೆ ಸಹಕಾರ ನೀಡಲಾಗುವುದು ಎಂದರು.
ಕೆಎಂಎಫ್ ನಿರ್ದೇಶಕ ಬಿ.ಸಿ. ಆನಂದ್ ಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ಹೈನುಗಾರಿಕೆಯೇ ಆದಾಯದ ಮೂಲವಾಗಿದ್ದು, ಯುವಜನತೆ ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಪ್ರಸ್ತುತ ಬೆಲೆ ಏರಿಕೆಯಿಂದಾಗಿ ಹೈನುಗಾರರು ಸಂಕಷ್ಟದಲ್ಲಿದ್ದಾರೆ. ಹಾಲಿನ ಖರೀದಿ ದರವನ್ನು 5 ರೂ. ಏರಿಕೆ ಮಾಡುವಂತೆ ಕೆಎಂಎಫ್ ಸರ್ಕಾರಕ್ಕೆ ಬೇಡಿಕೆಯಿಟ್ಟಿತ್ತು. ಸಿಎಂ ಸಿದ್ದರಾಮಯ್ಯ ಸ್ಪಂದಿಸಿ 3 ರೂ. ಏರಿಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪಶು ಆಹಾರದ ಇಳಿಕೆಗೆ ಅಗತ್ಯ ಕ್ರಮ ವಹಿಸಲಾಗುತ್ತದೆ ಎಂದರು.
ಬಮುಲ್ ಒಕ್ಕೂಟ ಉಪ ವ್ಯವಸ್ಥಾಪಕ ಎಲ್.ಬಿ.ನಾಗರಾಜು, ಮುನಿರಾಜೇಗೌಡ, ಗೊಲ್ಲಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಕೆ. ಹನುಮಂತರಾಯಪ್ಪ, ಉಪಾಧ್ಯಕ್ಷ ಶಿವಣ್ಣ, ಎಂಪಿಸಿಎಸ್ ನಿರ್ದೇಶಕ ಮಲ್ಲೇಶ್, ವೀರಕೆಂಪಣ್ಣ, ಡೇರಿ ಮುಖ್ಯಕಾರ್ಯನಿರ್ವಾಹಕ ಕೆಂಪಣ್ಣ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net