ಸಂಪೂರ್ಣ ಡಿಜಿಟಲ್ ಆದ ದೊಡ್ಡಬಳ್ಳಾಪುರ ಎಸಿ ಕಚೇರಿ

ac office doddaballapura
ac office doddaballapura
Published on

ಬೆಂಗಳೂರು ವಿಭಾಗದಲ್ಲಿ ಇ-ಆಫೀಸ್ ಅನುಷ್ಠಾನಗೊಂಡ ಮೊದಲ ಉಪವಿಭಾಗಧಿಕಾರಿ ಕಚೇರಿ


ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
ಯಾವುದೇ ಕಡತಗಳು ಇನ್ನುಂದೆ ಉಪವಿಭಾಗಾಧಿಕಾರಿಗಳ ಕಚೇರಿಯಿಂದ ನಾಪತ್ತೆಯಾಗುವ ಸಾಧ್ಯತೆ ಇಲ್ಲ. ಕಳವಾಗಿದೆ, ಹಾಳಾಗಿದೆ, ಸುಟ್ಟು ಹೋಗಿದೆ ಎಂಬ ಸಬೂಬು ಹೇಳುವಂತಿಲ್ಲ.
ಹೌದು! ದೊಡ್ಡಬಳ್ಳಾಪುರದ ಉಪವಿಭಾಗಧಿಕಾರಿ ಕಚೇರಿ ಸಂಪೂರ್ಣ ಡಿಜಟಲ್ ಆಗಿದ್ದು, ಇ- ಆಡಳಿತ ವ್ಯವಸ್ಥೆ ಅನುಷ್ಠಾನದ ಮೂಲಕ ಇವೆಲ್ಲ ಅವ್ಯವಸ್ಥೆಗೆ ಪೂರ್ಣವಿರಾಮ ಹಾಕಲಾಗಿದೆ.
ದಾಖಲೆಗಳ ಪತ್ತೆ ಸರಳೀಕರಣಇ-ಆಫೀಸ್ ಜಾರಿಯಿಂದಾಗಿ ಯಾವುದೇ ಕಡತ, ದಾಖಲೆಯನ್ನು ಒಂದು ಬಾರಿ ಸ್ಕ್ಯಾನ್ ಮಾಡಿ ಕಂಪ್ಯೂಟರ್‌ಗೆ ಅಪ್ ಲೋಡ್ ಮಾಡಿದರೆ ಎಷ್ಟೇ ವರ್ಷವಾದರೂ ಪೋರ್ಟಲ್‌ನಲ್ಲಿ ದಾಖಲೆಗಳು ಲಭ್ಯವಿರಲಿವೆ. ಗ್ರಾಮದ ಹೆಸರು ಮತ್ತು ಸರ್ವೆ ನಂಬರ್ ಫೀಡ್ ಮಾಡಿದರೆ ಮಾಹಿತಿ ಕ್ಷಣಾರ್ಧದಲ್ಲಿ ಸಿಗಲಿವೆ. ಕಂಪ್ಯೂಟರ್ ಹೋದರೂ ಡೆಟಾ ಮಾತ್ರ ಮತ್ತೆ ಸಿಗುವ ವ್ಯವಸ್ಥೆ ಮಾಡಲಾಗಿದೆ.
ಮನವಿ ಪತ್ರಗಳ ಕಡತವೂ ಆನ್ ಲೈನ್ ಯಾರೇ ಎಸಿ ಕಚೇರಿಗೆ ಮನವಿ ಸಲ್ಲಿಸಿದರೂ ಅದಕ್ಕೆ ಸಂಬಂಧಿಸಿದ ನೋಟ್‌ಶೀಟ್, ದಾಖಲೆ ಪತ್ರಗಳ ಸಹಿತ ಕಡತವೊಂದು ಈ ವರೆಗೆ ಸಿದ್ಧವಾಗುತ್ತಿತ್ತು. ಇನ್ನುಂದೆ ಈ ವ್ಯವಸ್ಥೆ ಇರುವುದಿಲ್ಲ, ಮನವಿ ಪತ್ರಗಳು, ದೂರು ಯಾವುದೇ ಅರ್ಜಿಗಳ ವಿಲೇವಾರಿಗೆ ಸಂಬಂಧಿಸಿದ ದಾಖಲೆಗಳನ್ನು ಕೂಡ ಸ್ಕ್ಯಾನ್ ಮಾಡಿ ಆನ್ ಲೈನ್‌ನಲ್ಲಿಯೇ ಕಡತ ಸಿದ್ಧವಾಗಲಿದೆ. ಅದಕ್ಕೆ ಸಂಬಂಧಿಸಿದ ಪೂರಕ ದಾಖಲೆ ಮತ್ತು ಮಾಹಿತಿ ಒಳಗೊಂಡಿರುತ್ತದೆ.
ಲಾಗಿನ್‌ನಿಂದ ಲಾಗಿನ್ ಕಡತ ರವಾನೆ ಈ ಹಿಂದಿನಂತೆ ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಇನ್ನುಂದೆ ಕಡತಗಳನ್ನು ಹೊತ್ತು ಸಾಗಬೇಕಿಲ್ಲ. ಲಾಗಿನ್‌ನಿಂದ ಲಾಗಿನ್‌ಗೆ ಕಡತ ರವಾನೆಯಾಗಲಿದೆ. ಸಮಯ ಮತ್ತು ದಿನಾಂಕ ಕರಾರುವಕ್ಕಾಗಿ ದಾಖಲಾಗುವುದರಿಂದ ಯಾರ ಬಳಿಯೂ ಕಡತ ಅನಗತ್ಯವಾಗಿ ವಿಳಂಬವಾಗಲು ಸಾಧ್ಯವಿಲ್ಲ. ಎಸಿ ಕಚೇರಿಯಲ್ಲಿನ ಕಡತಗಳ ಸ್ಥಿತಿಗತಿ ಪರಿಶೀಲಿಸಲು ಜಿಲ್ಲೆಯ ಅಪರ ಜಿಲ್ಲಾಧಿಕಾರಿ ನೋಡಲ್ ಅಧಿಕಾರಿಯಾಗಿದ್ದು, ಯಾವ ಕಡತ ಯಾವ ಹಂತದಲ್ಲಿದೆ ಎಂಬ ಮಾಹಿತಿ ಉನ್ನತ ಅಧಿಕಾರಿಗಳಿಗೆ ಸಂಪೂರ್ಣ ಲಭ್ಯವಿರಲಿದೆ. ಈ ಮೂಲಕ ಪಾರದರ್ಶಕ ಮತ್ತು ವೇಗವಾಗಿ ಅರ್ಜಿಗಳು ವಿಲೇವಾರಿ ಆಗಲಿವೆ.
ಮಧ್ಯವರ್ತಿಗಳ ಕಾಟಕ್ಕೆ ಕತ್ತರಿ ಕೆಲವು ದಿನಗಳಿಂದ ಇ-ಆಡಳಿತ ವ್ಯವಸ್ಥೆ ಜಾರಿಗೆ ಬಂದಿದ್ದು, ಎಸಿ ಕಚೇರಿಯಲ್ಲಿನ ಎಲ್ಲ ಕಡತಗಳು ಈಗ ಇ-ಆಡಳಿತದ ಮೂಲಕವೇ ಸಾಗುತ್ತಿವೆ. ಶೀಘ್ರದಲ್ಲೇ ಎಲ್ಲ ಕಚೇರಿಗಳ ಕಡತವೂ ಆನ್‌ಲೈನ್ ಮೂಲಕವೇ ಮುಂದಕ್ಕೆ ಸಾಗಲಿವೆ. ಕಡತಗಳ ಪ್ರಕ್ರಿಯೆ ಅನಗತ್ಯ ವಿಳಂಬಕ್ಕೆ ಇಲ್ಲಿ ಅವಕಾಶ ಇರುವುದಿಲ್ಲ. ವಿಳಂಬವಾದರೆ ಅದಕ್ಕೆ ಕಾರಣ ಯಾರು ಎಂಬುದು ಗೊತ್ತಾಗಲಿದೆ. ಮಧ್ಯವರ್ತಿಗಳಿಗೆ ಕಡತ ಎಲ್ಲಿದೆ ಎಂಬ ಮಾಹಿತಿ ಸಿಗುವುದಿಲ್ಲ. ಹೀಗಾಗಿ ಮಧ್ಯವರ್ತಿಗಳ ಕಾಟವೂ ತಪ್ಪಲಿದೆ. ಜತೆಗೆ ಜನರಿಗೆ ಸುಳ್ಳು ಹೇಳಲು ಅವಕಾಶ ಇರುವುದಿಲ್ಲ. ಈ ಮೂಲಕ ಭ್ರಷ್ಟಚಾರಕ್ಕೂ ಕಡಿವಾಣ ಹಾಕುವ ಉದ್ದೇಶ ಹೊಂದಲಾಗಿದೆ.


ಇಲಾಖೆಯಲ್ಲಿ ಪಾರದರ್ಶಕತೆ, ಭ್ರಷ್ಟಾಚಾರ ಮುಕ್ತ, ದಲ್ಲಾಳಿಗಳಿಗೆ ಬ್ರೇಕ್ ಹಾಕಿ ಪ್ರಾಮಾಣಿಕವಾಗಿ ರೈತರನ್ನು ತಾಲೂಕು, ಎಸಿ, ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ತಪ್ಪಿಸಿ ವೇಗವಾಗಿ ಅರ್ಜಿಗಳ ವಿಲೇವಾರಿ ಮಾಡಲು ಇಲಾಖೆಯನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲು ಕಂದಾಯ ಸಚಿವ ಕೃಷ್ಣಬೈರೇಗೌಡ ಸೂಚನೆ ನೀಡಿದ್ದಾರೆ. ಅದರ ಭಾಗವಾಗಿ ಬೆಂಗಳೂರು ವಿಭಾಗ ವ್ಯಾಪ್ತಿಯಲ್ಲಿ ಬರುವ ದೊಡ್ಡಬಳ್ಳಾಪುರ ಎಸಿ ಕಚೇರಿಯನ್ನು ಸಂಪೂರ್ಣ ಇ-ಆಡಳಿತಕ್ಕೆ ವರ್ಗಾಯಿಸಲಾಗಿದೆ. ಹಳೆಯ ಕಡತಗಳನ್ನು ಸಿಬ್ಬಂದಿ ಪರಿಶ್ರಮದಿಂದ ಡಿಜಿಟಲೀಕರಣಗೊಳಿಸಲಾಗಿದೆ.
ಎಂ.ಶ್ರೀನಿವಾಸ, ಉಪವಿಭಾಗಧಿಕಾರಿ, ದೊಡ್ಡಬಳ್ಳಾಪುರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net