ರಾಷ್ಟ್ರ ವಿರೋಧಿ ಶಕ್ತಿ ಎದುರಿಸಲು ಎಬಿವಿಪಿ ಹೋರಾಟ

abvp program
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಎಬಿವಿಪಿಯು ಜ್ಞಾನ, ಶೀಲ, ಏಕತೆಗಳ ಆಧಾರದ ಮೇಲೆ ವ್ಯಕ್ತಿತ್ವ ನಿರ್ಮಾಣ ಮಾಡುವ ಕನಸು ಹೊಂದಿದೆ ಎಂದು ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಹೇಳಿದರು.
ನಗರದ ಕೆಎಂಎಚ್ ಕನ್ವೆನ್ಷನ್ ಹಾಲ್‌ನಲ್ಲಿ ಎಬಿವಿಪಿಯಿಂದ ಮೂರು ದಿನಗಳವರೆಗೆ ಆಯೋಜಿಸಿರುವ ಕರ್ನಾಟಕ ದಕ್ಷಿಣ ಪ್ರಾಂತ ಅಭ್ಯಾಸ ವರ್ಗಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದಲ್ಲಿ 260 ಶಾಖೆಗಳು ಹಾಗೂ 273 ಸಂಪರ್ಕ ಸ್ಥಾನಗಳಲ್ಲಿ ಎಬಿವಿಪಿ ಚಟುವಟಿಕೆ ವಿಸ್ತರಿಸಿದೆ. ಒಟ್ಟು 5 ಲಕ್ಷ ಸದಸ್ಯರು ಸಂಘಟನೆಗೆ ಶಕ್ತಿ ತುಂಬಿದ್ದಾರೆ. ರಾಜ್ಯದ 2500ಕ್ಕೂ ಹೆಚ್ಚು ಕಾಲೇಜುಗಳು, 350ಕ್ಕೂ ಹೆಚ್ಚು ಹಾಸ್ಟೆಲ್‌ಗಳಲ್ಲಿ ಎಬಿವಿಪಿ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯಮುಕ್ತ ವಿಶ್ವವಿದ್ಯಾಲಯ ಉಳಿವು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿರೋಧಿ ನೀತಿ ಹಾಗೂ ರಾಷ್ಟ್ರ ವಿರೋಧಿ ದುಷ್ಟಶಕ್ತಿಗಳನ್ನು ಎದುರಿಸುವಲ್ಲಿ ಎಬಿವಿಪಿ ಪ್ರಬಲ ಹೋರಾಟ ರೂಪಿಸುತ್ತಾ ಬಂದಿದೆ ಎಂದರು.
ಪ್ರಾಂತ ಅಧ್ಯಕ್ಷ ಎಚ್.ಕೆ. ಸತೀಶ್ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿನ ಅನ್ಯಾಯ, ಅದಕ್ಷತೆ ಹಾಗೂ ಶಿಥಿಲತೆಗಳ ವಿರುದ್ಧ ಹೋರಾಡುವ ಜತೆಗೆ ಅನೇಕ ರಚನಾತ್ಮಕ ಕಾರ್ಯಗಳನ್ನು ಪರಿಷತ್ ನಡೆಸುತ್ತಾ ಬಂದಿದೆ. ರಾಜ್ಯದ ಹೆಚ್ಚಿನ ಎಲ್ಲ ಶಾಖೆಗಳಲ್ಲಿ ಅಧ್ಯಯನ ವೃತ್ತಗಳು, ವಿಚಾರ ಸಂಕಿರಣಗಳು, ಸ್ವಾಮಿ ವಿವೇಕಾನಂದ, ಬಾಬಾ ಸಾಹೇಬ್ ಅಂಬೇಡ್ಕರ್, ದೀನದಯಾಳ ಉಪಾಧ್ಯಾಯ, ಮಹಾತ್ಮ ಗಾಂಧಿ ಅವರಂಥ ಅನೇಕ ಮಹಾಪುರುಷರ ಜಯಂತಿ, ರಾಜ್ಯದ ತಾಂತ್ರಿಕ ವಿಭಾಗಗಳಲ್ಲಿ ಸಂಶೋಧನೆ ಪ್ರೋತ್ಸಾಹಿಸುವ ಜನ ಮುಖಿ, ರಾಷ್ಟ್ರಮುಖಿ ಹಾಗೂ ಸಮಾಜಮುಖಿಯಾಗಿಸುವ ಸೃಷ್ಟಿ ಕಾರ್ಯಕ್ರಮ ಆಯೋಜಿಸಿಕೊಂಡು ಬಂದಿದೆ ಎಂದರು.

ರಾಷ್ಟ್ರಮರು ನಿರ್ಮಾಣದಲ್ಲಿ ಯುವಶಕ್ತಿಯ ಬಳಕೆ ಕೇಂದ್ರೀಕೃತವಾದ ವಿಚಾರ ವಿನಿಮಯ, ಚರ್ಚಾಗೋಷ್ಠಿಗಳು ನಡೆಯಲಿವೆ. ಕಾರ್ಯಕರ್ತರಿಗೆ ಸಂಘಟನೆಯ ಸಿದ್ಧಾಂತ, ಪರಿಷತ್‌ನ ಕಾರ್ಯ ಪದ್ಧತಿ, ಶಾಖೆಗಳ ಸಂಚಲನೆ, ಕಾಲೇಜು ಕ್ಯಾಂಪಸ್‌ಗಳಲ್ಲಿ ನೇತೃತ್ವ ಮತ್ತು ಕಾರ್ಯ ಮುಂತಾದ ವಿಷಯಗಳ ಕುರಿತು ವಿಷಯ ಮಂಡನೆ ಮತ್ತು ಚರ್ಚೆಗಳು, ಪ್ರಚಲಿತ ವಿಷಯಗಳ ಕುರಿತು ವಿಶೇಷ ಭಾಷಣ, ಸಾಮಾಜಿಕ ಜಾಲತಾಣಗಳ ಬಳಕೆ, ಪತ್ರಿಕಾ ಬರಹ, ಭಾಷಣ ಕಲೆ, ಗೀತ ಪ್ರಶಿಕ್ಷಣ ಹಮ್ಮಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net