ರೇಷ್ಮೆ ಬೆಳೆದು ರಾಜ್ಯಪ್ರಶಸ್ತಿ ಗಿಟ್ಟಿಸಿದ ರತ್ನಮ್ಮ ; 1 ಎಕರೆಯಲ್ಲಿ 3.83 ಲಕ್ಷ ರೂ. ಲಾಭ ಗಳಿಸಿದ ಹಿರಿಯ ಮಹಿಳೆ

6dbp2
Published on

ದೊಡ್ಡಬಳ್ಳಾಪುರ: ತೂಬಗೆರೆ ಹೋಬಳಿ ಸೀಗೇಹಳ್ಳಿಯ ರತ್ನಮ್ಮ ಎಂಬುವರು ಕಡಿಮೆ ಜಮೀನಿನಲ್ಲಿ ಹೆಚ್ಚು ಲಾಭ ಗಳಿಸಿ ರಾಜ್ಯಮಟ್ಟದ ಪ್ರಗತಿಪರ ಮಹಿಳಾ ರೇಷ್ಮೆ ಬೆಳಗಾರರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದರೊಂದಿಗೆ ಕಸಬಾ ಹೋಬಳಿ ಮರಳೇನಹಳ್ಳಿ ಗ್ರಾಮದ ತಿಮ್ಮರಾಜು ಗಂಗಪ್ಪ ಅವರು ಪುರುಷ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ದ್ವಿತೀಯ ಸ್ಥಾನ ಪಡೆದುಕೊಂಡು ತಾಲೂಕಿಗೆ ಗೌರವ ತಂದುಕೊಟ್ಟಿದ್ದಾರೆ. ನಂದಿ ಬೆಟ್ಟ, ಚನ್ನರಾಯಸ್ವಾಮಿ ಬೆಟ್ಟದ ಸಾಲಿನಲ್ಲಿ ಬರುವ ಸೀಗೆಹಳ್ಳಿಯ ರತ್ಮಮ್ಮ ರಾಮಯ್ಯ ಅವರು 2020-21ನೇ ಸಾಲಿನಲ್ಲಿ ಒಂದು ಎಕರೆಯಲ್ಲಿ ವೆಚ್ಚ ಹೊರತುಪಡಿಸಿ 3.83 ಲಕ್ಷ ರೂಪಾಯಿ ಲಾಭ ಪಡೆದು, ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ರೈತರು ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ರತ್ನಮ್ಮ ಅವರು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು, ರೇಷ್ಮೆ ಇಲಾಖೆ ಅಧಿಕಾರಿಗಳ ಸಲಹೆ ಸೂಚನೆ ಪಾಲಿಸಿ ಆರ್ಥಿಕವಾಗಿ ಸಾಧನೆ ಮಾಡಿದ್ದಾರೆ. ಪ್ರಶಸ್ತಿ ಬಂದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ರತ್ನಮ್ಮ, 25 ವರ್ಷಗಳಿಂದ ರೇಷ್ಮೆ ಕೃಷಿಯಲ್ಲಿ ತೊಡಗಿಕೊಂಡಿದ್ದೇನೆ. ಇಲಾಖೆ ಸಹಯೋಗದಲ್ಲಿ ಶೇ.100ಕ್ಕೂ ಹೆಚ್ಚು ಇಳುವರಿ ಪಡೆಯುತ್ತಿದ್ದೇವೆ. 10 ವರ್ಷಗಳ ಹಿಂದೆ ಪ್ರತಿ ಕೆಜಿ ಗೂಡಿಗೆ 150ರಿಂದ 300 ರೂ. ದರ ಇತ್ತು. ಪ್ರಸ್ತುತ 900 ರೂ. ಇರುವುದರಿಂದ ಹೆಚ್ಚಿನ ಲಾಭ ಬಂದಿದೆ ಎಂದರು.

5 ಬೆಳೆ ಬೆಳೆಯುವ ತಿಮ್ಮರಾಜು:ತಿಮ್ಮರಾಜು ಗಂಗಪ್ಪ 1 ಎಕರೆಯಲ್ಲಿ ರೇಷ್ಮೆ ಕೃಷಿ ಮಾಡಿಕೊಂಡು, ವಾರ್ಷಿಕವಾಗಿ 5 ಬೆಳೆಗಳನ್ನು ಬೆಳೆಯುತ್ತಾ 3.5 ಲಕ್ಷ ರೂಪಾಯಿ ಲಾಭ ಗಳಿಸಿದ್ದಾರೆ. ತಾಲೂಕಿನಲ್ಲಿ ರೇಷ್ಮೆ ಬೆಳೆಗಾರರು ಕಡಿಮೆ ಸಂಖ್ಯೆಯಲ್ಲಿದ್ದರು. 2020-21ನೇ ಸಾಲಿನಿಂದ ಬೆಳೆಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಸ್ತುತ ದೊಡ್ಡಬಳ್ಳಾಪುರ ತಾಲೂಕಿನ 35 ಹೆಕ್ಟೇರ್‌ನಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದೆ ಎಂದು ತಾಲೂಕು ರೇಷ್ಮೆ ಸಹಾಯಕ ನಿರ್ದೇಶಕ ಉದಯ ಹೇಳಿದರು.

ಈ ಹಿಂದೆ ರೇಷ್ಮೆ ಇಲಾಖೆ ಬಗ್ಗೆ ತಿಳಿದಿರಲಿಲ್ಲ. ಇಲಾಖೆಯ ಸಹಕಾರ ಸಿಕ್ಕ ಬಳಿಕ ಸಾಕಷ್ಟು ಅನುಕೂಲವಾಯಿತು. ವರ್ಷಕ್ಕೆ 11 ಬೆಳೆಗಳನ್ನು ಬೆಳೆಯುತ್ತಿದ್ದೇನೆ. ಸರ್ಕಾರದಿಂದ ದೊರೆಯುವ ಸಹಾಯಧನವನ್ನು ಸಮರ್ಪಕವಾಗಿ ಬಳಸಿಕೊಂಡು ಶ್ರಮ, ಶ್ರದ್ಧೆಯಿಂದ ಕೆಲಸ ಮಾಡಿದರೆ ಸೂಕ್ತ ಪ್ರತಿಲ ಖಂಡಿತ ಸಿಗುತ್ತದೆ. ರತ್ನಮ್ಮ ರಾಮಯ್ಯ, ಸೀಗೆಹಳ್ಳಿ ರೇಷ್ಮೆ ಬೆಳೆಗಾರರು ರತ್ನಮ್ಮ ಅವರು ರೇಷ್ಮೆ ಪ್ರಗತಿಪರ ರೈತರಾಗಿ ರಾಜ್ಯಮಟ್ಟದ ಪ್ರಶಸ್ತಿ ಪಡೆದುಕೊಂಡಿದ್ದಾರೆ. 100 ದ್ವಿತಳಿ ಮೊಟ್ಟೆಗೆ 1 ಸಾವಿರ ರೂ. ಸಹಾಯಧನ ಪಡೆಯುತ್ತಿದ್ದು, 3.10 ಎಕರೆ ಭೂಮಿಯ ಪೈಕಿ, 1 ಎಕರೆ ಭೂಮಿಯಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ಹಿಪ್ಪು ನೇರಳೆ ಬೆಳೆಯಲು ನರೇಗಾದಲ್ಲಿ ಸಹಾಯಧನ, ಹುಳು ಸಾಕಾಣಿಕೆ ಸಲಕರಣೆ, ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೂ ಸಹಾಯಧನ ಪಡೆದಿದ್ದಾರೆ. ಉದಯ, ದೊಡ್ಡಬಳ್ಳಾಪುರ ತಾಲೂಕು ರೇಷ್ಮೆ ಸಹಾಯಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net