

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ತಾಲೂಕಿನ ವೀರಾಪುರದ ಮಾರಮ್ಮ ಹಾಗೂ ಆಂಜನೇಯ ದೇವಸ್ಥಾನಗಳಿಗೆ ದುಷ್ಕರ್ಮಿಗಳು ಕನ್ನ ಹಾಕಿದ್ದು, ಹುಂಡಿ ಹಣ ಮತ್ತು ದೇವರ ಚಿನ್ನದ ತಾಳಿ ಕದ್ದೊಯ್ದಿದ್ದಾರೆ.
ಮಾರಮ್ಮ ದೇವಸ್ಥಾನದ ಬೀಗ ಮುರಿದು, ಒಳ ನುಗ್ಗಿದ್ದು, ಮಾರಮ್ಮ ದೇವರ ಕೊರಳಿನಲ್ಲಿದ್ದ 8 ಚಿನ್ನದ ತಾಳಿಗಳು, ಬೆಳ್ಳಿ ಆಭರಣಗಳು ಹಾಗೂ ಹುಂಡಿಯಲ್ಲಿದ್ದ ಹಣ ದೋಚಿದ್ದಾರೆ. ಹುಂಡಿಯಲ್ಲಿ ಸುಮಾರು 50 ಸಾವಿರ ರೂ. ಇತ್ತು ಎನ್ನಲಾಗಿದ್ದು, 3,600 ರೂ.ಚಿಲ್ಲರೆ ಹಣವನ್ನು ಅಲ್ಲೇ ಬಿಟ್ಟಿದ್ದಾರೆ. ಮರುದಿನ ಸಂಜೆ ಪೂಜಾರಿ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮಾರಮ್ಮ ದೇವಸ್ಥಾನದ ಹಿಂಭಾಗದಲ್ಲಿರುವ ಆಂಜನೇಯ ದೇವಸ್ಥಾನದ ಹುಂಡಿಗೂ ಕನ್ನ ಹಾಕಿದ್ದಾರೆ. ಬಳಿಕ ಹುಂಡಿಯನ್ನು ಗ್ರಾಮದ ಹೊರಗಿನ ನೀಲಗಿರಿ ತೋಪಿನಲ್ಲಿ ಎಸೆದು ಪರಾರಿಯಾಗಿದ್ದಾರೆ. ಕಳ್ಳರ ಚಲನವಲನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೊಡ್ಡಬಳ್ಳಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.