

ವಿಜಯವಾಣಿ ಸುದ್ದಿಜಾಲ ಬೆಂ,ಗಾ.ಮಾಂತರ/ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರ ತಾಲೂಕು ಕಸಬಾ ಹೋಬಳಿ ಮೋಪರಹಳ್ಳಿಯಲ್ಲಿ ನಿರ್ಮಿತಿ ಕೇಂದ್ರದ ಇಂಜಿನಿಯರ್ ಮನೆಯಲ್ಲಿ ಇತ್ತೀಚೆಗೆ ಇವಿಎಂ ಕಂಟ್ರೋಲ್ ಯೂನಿಟ್ ಪತ್ತೆಯಾದ ಪ್ರಕರಣದ ತನಿಖಾ ವರದಿ ಜಿಲ್ಲಾಧಿಕಾರಿಗೆ ತಲುಪಿದೆ ಎನ್ನಲಾಗಿದ್ದು, ಇಂಜಿನಿಯರ್ ಈ ಯೂನಿಟ್‌ಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾದರೂ ಏಕೆ ಎನ್ನುವ ಸತ್ಯಾಂಶ ಹೊರಬರಬೇಕಿದೆ.
ಮೇಲ್ನೋಟಕ್ಕೆ 2018ರ ವಿಧಾನಸಭಾ ಚುನಾವಣೆ ವೇಳೆ ತಾಂತ್ರಿಕ ಕಾರಣಕ್ಕೆ ಬಳಸಲಾಗದ ಇವಿಎಂ ಕಂಟ್ರೋಲ್ ಯೂನಿಟ್‌ಗಳಾಗಿವೆ ಎನ್ನಲಾಗಿದ್ದು. ಇಂಜಿನಿಯರ್ ಇಷ್ಟು ದಿನ ಮನೆಯಲ್ಲಿ ಇಟ್ಟುಕೊಂಡಿದ್ದರ ಹಿಂದಿನ ರಹಸ್ಯವೇನು ಎಂಬುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಪ್ರಕರಣದ ತನಿಖೆಗಾಗಿ ಉಪವಿಭಾಗಾಧಿಕಾರಿ ಶ್ರೀನಿವಾಸ್ ಅವರನ್ನು ನೇಮಕ ಮಾಡಿತ್ತು.
ತಹಸೀಲ್ದಾರ್ ವಶಕ್ಕೆ ಪಡೆದಿದ್ದರು: ರಾಷ್ಟ್ರೀಯ ಹೆದ್ದಾರಿ ರಸ್ತೆ ವಿಸ್ತರಣೆ ವೇಳೆ ಗ್ರಾಮದಲ್ಲಿನ ಎಇಇ ಮಾಲೀಕತ್ವದ ಮನೆ ನೆಲಸಮ ಮಾಡಲಾಗಿತ್ತು. ಈ ವೇಳೆ ಇವಿಎಂ ಕಂಟ್ರೋಲ್ ಯೂನಿಟ್‌ಗಳು ಪತ್ತೆಯಾಗಿದ್ದವು. ಸ್ಥಳಕ್ಕೆ ತಹಸೀಲ್ದಾರ್‌ಮೋಹನ ಕುಮಾರಿ ಭೇಟಿ ನೀಡಿ ಯೂನಿಟ್ ವಶಕ್ಕೆ ಪಡೆದಿದ್ದರು.ಈ ಬಗ್ಗೆ ಇಂಜಿನಿಯರ್‌ಗೆ ನೋಟಿಸ್ ನೀಡಲಾಗಿತ್ತು. ಇಂಜಿನಿಯರ್ ಮನೆಯಲ್ಲಿ ದೊರೆತ 7 ಇವಿಎಂ ಕಂಟ್ರೋಲ್ ಯೂನಿಟ್ ಯಂತ್ರಗಳನ್ನು ವಶಕ್ಕೆ ಪಡೆ ಅಧಿಕಾರಿಗಳು ಅವುಗಳನ್ನು ಜಿಲ್ಲಾಡಳಿತದ ಖಜಾನೆಗೆ ರವಾನಿಸಿದ್ದರು.
2018 ಅಲ್ಲ 2013? ಉಪವಿಭಾಗಾಧಿಕಾರಿ ತನಿಖೆಯಲ್ಲಿ ಈ ಯೂನಿಟ್‌ಗಳು 2013 ರ ಚುನಾವಣೆ ವೇಳೆ ತರಿಸಿದವು ಎಂಬುದು ದೃಢಪಟ್ಟಿದೆ ಎನ್ನಲಾಗಿವೆ. ಆದರೆ ಇವುಗಳು ಚುನಾವಣಾ ಪ್ರಕ್ರಿಯೆಯಲ್ಲಿ ಬಳಕೆಯಾಗಿಲ್ಲ. ತಾಂತ್ರಿಕ ದೋಷದ ಕಾರಣ ಇವುಗಳನ್ನು ರಿಜೆಕ್ಟ್ ಮಾಡಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮನೆಯಲ್ಲಿ ಇಟ್ಟುಕೊಂಡಿದ್ದು ಏಕೆ? ಇಷ್ಟು ವರ್ಷ ಮಹತ್ತರವಾದ ಯೂನಿಟ್‌ಗಳನ್ನು ಜಿಲ್ಲಾಡಳಿತ ವಶಕ್ಕೆ ನೀಡದೆ ಇಂಜಿನಿಯರ್ ಮನೆಯಲ್ಲಿ ಏಕೆ ಇಟ್ಟುಕೊಂಡಿದ್ದರು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಇಂಜಿನಿಯರ್ ರಿಜೆಕ್ಟ್ ಆದ ಯೂನಿಟ್‌ಗಳನ್ನು ಮನೆಯಲ್ಲಿ ಏಕೆ ಇಟ್ಟುಕೊಂಡಿದ್ದರು ಎಂಬುದು ಎಸಿ ತನಿಖೆಯಲ್ಲಿ ದಾಖಲಾಗಿದೆ, ಈ ವರದಿ ಜಿಲ್ಲಾಧಿಕಾರಿಗೆ ತಲುಪಿದೆ ಎನ್ನಲಾಗಿದ್ದು ಪ್ರಕರಣದಲ್ಲಿನ ತಿರುಳು ಏನಿರಬಹುದು ಎಂಬ ಕುತೂಹಲ ಹಾಗೇ ಇದೆ.