

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ದೊಡ್ಡಬಳ್ಳಾಪುರ
ಚುನಾವಣಾ ಪ್ರಣಾಳಿಕೆಯಲ್ಲಿ ೋಷಣೆ ಮಾಡಿದ್ದ ಭ್ರಷ್ಟಾಚಾರಮುಕ್ತ, ನವದೊಡ್ಡಬಳ್ಳಾಪುರ ನಿರ್ಮಾಣಕ್ಕೆ ಬದ್ಧನಾಗಿದ್ದು, ಇದಕ್ಕಾಗಿ ಸಾಕಷ್ಟು ಹೋಂವರ್ಕ್ ಮಾಡಿದ್ದೇನೆ. ನನ್ನ ಅಧಿಕಾರ ಅವಧಿಯಲ್ಲಿ ನವದೊಡ್ಡಬಳ್ಳಾಪುರ ನಿರ್ಮಾಣಕ್ಕೆ ಕಂಕಣಬದ್ಧನಾಗಿದ್ದೇನೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ಬೆಂಗಳೂರಿನ ವಿಜಯವಾಣಿ ಕಚೇರಿಯಲ್ಲಿ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕರು, ಈ ನಿಟ್ಟಿನಲ್ಲಿ ನೀಲಿನಕ್ಷೆ ಸಿದ್ಧವಾಗಿದ್ದು, ಹಂತಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು. ತಾಲೂಕಿನಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಗ್ರಾಪಂ ಮಟ್ಟದಿಂದಲೇ ಚಾಟಿ ಬೀಸಲಾಗುತ್ತಿದೆ. ಪ್ರತಿ ಗ್ರಾಪಂನಲ್ಲಿನ ಪಿಡಿಒಗಳು ಹಾಗೂ ನಗರಸಭೆಯಲ್ಲಿನ ಅಧಿಕಾರಿಗಳು ಲಂಚಕ್ಕೆ ಕೈಯೊಡ್ಡದಿದ್ದರೆ ತನ್ನಿಂತಾನೆ ತಾಲೂಕು ಭ್ರಷ್ಟಾಚಾರಮುಕ್ತಗೊಳ್ಳಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದೇನೆ. ಯಾವುದೇ ಕಾರಣಕ್ಕೂ ಹಣದ ಆಸೆಗೆ ದುಡ್ಡುಕೊಟ್ಟು ನನ್ನ ತಾಲೂಕಿಗೆ ಪೋಸ್ಟಿಂಗ್ ಮಾಡಿಸಿಕೊಳ್ಳಬೇಡಿ. ಹಾಗೇನಾದರೂ ಸಾರ್ವಜನಿಕರಿಂದ ದೂರು ಬಂದರೆ ನೇರವಾಗಿ ಲೋಕಾಯುಕ್ತಕ್ಕೆ ದೂರು ನೀಡುತ್ತೇನೆ. ಅಲ್ಲದೆ ಸಾಧ್ಯವಾದ ಎಲ್ಲ ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ ಎಂದು ಈಗಾಗಲೇ ಸಾಕಷ್ಟು ಬಾರಿ ಸ್ಪಷ್ಟ ಎಚ್ಚರಿಕೆ ನೀಡಿದ್ದೇನೆ ಎಂದು ತಿಳಿಸಿದರು.
ರಿಕ್ವೆಸ್ಟ್ ಮೂಡ್‌ನಿಂದ ಹೋರಾಟದ ಹಂತ: ನಾನು ಶಾಸಕನಾಗಿ ಅಧಿಕಾರ ಬಳಸಬಹುದೇ ಹೊರತು ಎಲ್ಲವನ್ನೂ ಅಧಿಕಾರಿಗಳೇ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ವಿಶ್ವಾಸ ಗಳಿಸುವ ಪ್ರಯತ್ನ ಮಾಡುತ್ತಿದ್ದೇನೆ. ಸದ್ಯಕ್ಕೆ ಅಧಿಕಾರಿಗಳೊಂದಿಗೆ ರಿಕ್ವೆಸ್ಟ್ ಮೂಡ್‌ನಲ್ಲಿದ್ದೇನೆ. ಇದಕ್ಕೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ. ಅಲ್ಲದೆ ಎಲ್ಲ ಬಗೆಯ ಕಾನೂನು ಕ್ರಮಕ್ಕೂ ಮುಂದಾಗಲಿದ್ದೇನೆ ಎಂದು ಹೇಳಿದರು.
ನೇಕಾರರಿಗೆ ಮಾರುಕಟ್ಟೆ ನಿರ್ಮಾಣದ ಕನಸು: ರಾಜ್ಯದಲ್ಲೇ ಎರಡು ಜಿಲ್ಲೆ ಹೊರತುಪಡಿಸಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 70 ಸಾವಿರಕ್ಕೂ ಹೆಚ್ಚು ನೇಕಾರರಿದ್ದಾರೆ. ಇಲ್ಲಿನ ಸೀರೆಗಳು ಧರ್ಮಾವರಂ, ಬೆಂಗಳೂರು, ಕಂಚಿ ಭಾಗಗಳಿಗೆ ರ‌್ತಾಗುತ್ತಿವೆ. ಆದರೆ ಇದರಿಂದ ನೇಕಾರರಿಗೆ ನಿರೀಕ್ಷಿತ ಲಾಭ ಸಿಗುತ್ತಿಲ್ಲ. ಅಲ್ಲದೆ ಜಿಎಸ್‌ಟಿ, ಸಾರಿಗೆ ಅವ್ಯವಸ್ಥೆಯಿಂದ ನೇಕಾರರು ಬಳಲಿದ್ದಾರೆ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಹೈಟೆಕ್ ಮಾರುಕಟ್ಟೆ ನಿರ್ಮಾಣ ಮಾಡಬೇಕು ಎಂಬ ಕನಸಿದೆ. ಈ ಬಗ್ಗೆ ಈಗಾಗಲೇ ಜವಳಿ ಖಾತೆ ಸಚಿವರಿಗೆ ಮನವಿ ಮಾಡಿದ್ದೇನೆ. ಅವರಿಂದ ಗ್ರೀನ್ ಸಿಗ್ನಲ್‌ಗೆ ಕಾಯುತ್ತಿದ್ದೇನೆ ಎಂದು ಶಾಸಕರು ಹೇಳಿದರು.
ಮೂಲಸೌಕರ್ಯಕ್ಕೆ ಅನುದಾನ ಬಂದೇ ಬರುತ್ತದೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ, ನಾನು ಬಿಜೆಪಿ ಶಾಸಕನಾಗಿದ್ದೇನೆ. ಆದ್ದರಿಂದ ನಿರೀಕ್ಷಿತ ಅನುದಾನ ಸಿಗಲ್ಲ ಎಂಬ ಮಾತುಗಳು ಹರಿದಾಡುವುದು ಸಹಜ. ಆದರೆ ವಾಸ್ತವದಲ್ಲಿ ಯಾವುದೇ ಸರ್ಕಾರವಿದ್ದರೂ ಮೂಲಸೌಕರ್ಯಗಳಿಗೆ ಅನುದಾನ ನೀಡಲೇಬೇಕು, ಕೆಲವೊಂದು ಹೊಸ ಯೋಜನೆಗಳಿಗೆ ಹಸಿರು ನಿಶಾನೆ ಸಿಗುವುದು ಕಷ್ಟಸಾಧ್ಯ ಎಂಬಂತಿದ್ದರೂ ಮೂಲಸೌಕರ್ಯಗಳಿಗೆ ಅನುದಾನ ಬಂದೇ ಬರುತ್ತದೆ ಎಂದು ಧೀರಜ್‌ಮುನಿರಾಜು ವಿಶ್ವಾಸ ವ್ಯಕ್ತಪಡಿಸಿದರು.
ಶುದ್ಧ ಕುಡಿವ ನೀರಿನ ಘಟಕಗಳಿಗೆ ಕಾವೇರಿ ನೀರಿನ ಕನಸು: ತಾಲೂಕಿನಲ್ಲಿ ಸದ್ಯಕ್ಕೆ ಜಕ್ಕಲಮಡುಗುನಿಂದ ನೀರು ದೊರಕುತ್ತಿದೆ, ಆದರೆ ಸಾಕಾಗುತ್ತಿಲ್ಲ. ವಾರಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಶಾಶ್ವತ ನೀರಾವರಿ ಯೋಜನೆಗಳು ಇಲ್ಲ. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಯೋಜನೆ ಬಗ್ಗೆ ಚಿಂತನೆ ನಡೆಯುತ್ತಿದೆ. ಸದ್ಯಕ್ಕೆ ನಗರದಲ್ಲಿ ಶುದ್ಧ ಕುಡಿವ ನೀರಿನ ಘಟಕಗಳಿಗೆ ಕಾವೇರಿ ನೀರು ದೊರಕಿಸಿಕೊಡಬೇಕೆಂಬ ಕನಸಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರದೊಂದಿಗೆ ಚರ್ಚೆ ನಡೆಸುತ್ತಿದ್ದೇನೆ ಎಂದು ಶಾಸಕರು ಹೇಳಿದರು.
ಇಂಜಿನಿಯರಿಂಗ್ ಕಾಲೇಜು ಬೇಕು: ತಾಲೂಕಿನಲ್ಲಿ ಒಂದು ಪದವಿ ಕಾಲೇಜು ಹಾಗೂ 4 ಪಿಯು ಕಾಲೇಜುಗಳಿವೆ. ಅದರೆ ಇಂಜಿನಿಯರಿಂಗ್, ಮೆಡಿಕಲ್ ಹಾಗೂ ಡಿಪ್ಲೊಮಾ ಕಾಲೇಜುಗಳಿಲ್ಲ. ಇದರಿಂದ ಇಲ್ಲಿನ ವಿದ್ಯಾರ್ಥಿಗಳು ಬೆಂಗಳೂರು ಸೇರಿ ಇನ್ನಿತರ ಜಿಲ್ಲೆಗಳತ್ತ ಹೋಗಬೇಕಿದೆ. ತಾಲೂಕಿಗೆ ಇಂಜಿನಿಯರಿಂಗ್ ಕಾಲೇಜು ತರಬೇಕು ಎಂಬ ಮಹದಾಸೆ ಇದೆ. ಇಲ್ಲಿ ಹೆಚ್ಚಿನ ಕೈಗಾರಿಕೆಗಳಿದ್ದು ಕೌಶಲಾಧಾರಿತ ಶಿಕ್ಷಣ ದೊರಕಿಸಿಕೊಡಬೇಕು ಎಂದು ಶಾಸಕರು ಇಂಗಿತ ವ್ಯಕ್ತಪಡಿಸಿದರು.
ಜಿಲ್ಲಾ ಕೇಂದ್ರಕ್ಕೆ ದೊಡ್ಡಬಳ್ಳಾಪುರ ಸೂಕ್ತ: ಭೌಗೋಳಿಕವಾಗಿ ದೊಡ್ಡಬಳ್ಳಾಪುರ ಎಲ್ಲ ರೀತಿಯಿಂದಲೂ ಜಿಲ್ಲಾ ಕೇಂದ್ರವಾಗಲು ಸೂಕ್ತವಾಗಿದೆ. ತಾಲೂಕಿನಲ್ಲಿ ಎಸಿ ಕಚೇರಿಗೆ ಭೂಮಿ ಗುರುತಿಸಲಾಗಿದೆ. ಎಸ್‌ಪಿ ಕಚೇರಿಗೂ ಜಾಗ ಇದೆ. ಜಿಲ್ಲಾ ಕ್ರೀಡಾಂಗಣ, ಕಾರಾಗೃಹ ನಿರ್ಮಾಣಕ್ಕೂ ರೂಪುರೇಷೆ ಸಿದ್ಧವಾಗಿದೆ. ಆದರೆ ಹಿಂದಿನ ಸರ್ಕಾರಗಳು ಅನುಷ್ಠಾನಕ್ಕೆ ಮುಂದಾಗಿಲ್ಲ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟವರ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ. ಇವೆಲ್ಲವೂ ತಾಲೂಕಿಗೆ ಲಭಿಸಿದರೆ ಜಿಲ್ಲಾ ಕೇಂದ್ರದ ಹೋರಾಟಕ್ಕೆ ಮತ್ತಷ್ಟು ಶಕ್ತಿ ಬಂದಂತಾಗುತ್ತದೆ ಎಂದು ಶಾಸಕರು ಹೇಳಿದರು. ದೊಡ್ಡಬಳ್ಳಾಪುರದಲ್ಲೇ ಸಾಕಷ್ಟು ಸರ್ಕಾರಿ ಭೂಮಿ ಇದ್ದರೂ ದೇವನಹಳ್ಳಿಯಲ್ಲಿ ಭೂಮಿ ಖರೀದಿಸಿ ಜಿಲ್ಲಾಡಳಿತ ಭವನ ನಿರ್ಮಾಣ ಮಾಡುವ ಹಕೀಕತ್ತಾದರೂ ಏನಿತ್ತು ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದರು.