

ಎಚ್.ಡಿ.ಕೋಟೆ: ಸರ್ಕಾರದ ಸೌಲಭ್ಯಗಳನ್ನು ಪಡೆಯಲು ವೈಯುಕ್ತಿಕ ದಾಖಲಾತಿಗಳು ಮುಖ್ಯವಾಗಿದ್ದು, ಆದಿವಾಸಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಜಿ.ಆರ್.ಮಹೇಶ್ ತಿಳಿಸಿದರು.
ತಾಲೂಕಿನ ಬಸವನಗಿರಿ ಹಾಡಿಯ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯಲ್ಲಿ ಸೊಮವಾರ ಹಮ್ಮಿಕೊಂಡಿದ್ದ ಆದಿವಾಸಿಗಳಿಗೆ ದಾಖಲೆಗಳು ಪರಿಷ್ಕರಣ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಆ.4 ರಿಂದ ಸೆ.10 ರವರೆಗೆ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಉಲ್ಲೇಖಿತ ಸಚಿವಾಲಯದ ನಿರ್ದೇಶನದಂತೆ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ವ್ಯಾಪ್ತಿಯ ಹಾಡಿಗಳಲ್ಲಿ ವಾಸಿಸುವ ನೈಜ ದುರ್ಬಲ ಬುಡಕಟ್ಟು ಜೇನು ಕುರುಬ ಸಮುದಾಯದ ಜನರಿಗೆ ಬಾಕಿ ಇರುವ ಹೊಸದಾಗಿ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಯುಷ್ಮಾನ್ ಭಾರತ್ ಕಾರ್ಡ್, ಜನ್‌ದನ್ ಖಾತೆ, ಪಡಿತರ ಚೀಟಿ, ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಜಾಬ್ ಕಾರ್ಡ್‌ಗಳನ್ನು ಹೊಸದಾಗಿ ಮಾಡಿಸಲು ಮತ್ತು ಅಪ್ಡೇಟ್ ಮಾಡಲು ಐಸಿ ಕ್ಯಾಂಪ್‌ಗಳನ್ನು ಆಯೋಜಿಸಲಾಗಿದ್ದು, ಫಲಾನುಭವಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಚಕ್ಕೋಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹಾಡಿಯ ಜನರು ದಾಖಲಾತಿ ಮಾಡಿಸಿಕೊಳ್ಳದೆ ಇರುವವರು ಮಂಗಳವಾರ ಕೂಡ ದಾಖಲಾತಿ ಶಿಬಿರ ಇದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ 50 ಜನ ಆಧಾರ್ ಕಾರ್ಡ್ ಹಾಗೂ 5 ಜನರಿಗೆ ಬ್ಯಾಂಕ್ ಖಾತೆ ತೆರೆಯಲಾಯಿತು. ತಾಲೂಕು ಆರೋಗ್ಯ ಅಧಿಕಾರಿ ಡಾ.ಟಿ .ರವಿಕುಮಾರ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯವಸ್ಥಾಪಕ ನಾಗರಾಜು, ಚಕ್ಕೋಡನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ, ಆದಿವಾಸಿ ಮುಖಂಡರಾದ ವಿಜಯ ಕುಮಾರ್, ನಟರಾಜು, ಮಹಾದೇವು, ಮುಖ್ಯಶಿಕ್ಷಕ ರಮೇಶ್ ಇದ್ದರು.