ಮೈಸೂರು: ದೋಸ್ತಿ ಕ್ರಿಯೇಷನ್‌ನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ನೋವನ್ನು ಬಿಂಬಿಸುವ ಸಾಕ್ಷೃಚಿತ್ರ ‘ಸೌಜನ್ಯ’ ಟೈಟಲ್‌ಅನ್ನು ಅನಾವರಣಗೊಳಿಸಲಾಯಿತು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಚಿತ್ರದ ನಿರ್ದೇಶಕ ಚೇತನ್ ದೇವರಾಜ್ ಅವರು ಶೀರ್ಷಿಕೆ ಬಿಡುಗಡೆಗೊಳಿಸಿ ಮಾತನಾಡಿ, ದೌರ್ಜನ್ಯ ಎಸಗುವವರು ಸಹ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ನೋವನ್ನು ಕಂಡು ಒಂದು ಕ್ಷಣ ಮರುಗುವಂತೆ ಮಾಡುವ ಉದ್ದೇಶ ಇದಾಗಿದೆ ಎಂದು ಹೇಳಿದರು.
ಈ ಕಿರುಚಿತ್ರ ನೋಡುವವರಿಗೆ ಧರ್ಮಸ್ಥಳದ ಸೌಜನ್ಯಾ ಒಂದು ಕ್ಷಣ ನೆನಪಾಗಬಹುದು. ಆದರೆ, ಆ ಪಾತ್ರ ಎಲ್ಲ ಮಹಿಳೆಯರ ಬಗೆಗೂ ಇರಲಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಎಷ್ಟೋ ಹೆಣ್ಣು ಮಕ್ಕಳು ಸಂಕಟಪಟ್ಟಿದ್ದಾರೆ. ಆದರೆ ದೌರ್ಜನ್ಯ ಎಸಗಿದವರು ಸುಮ್ಮನಿರುತ್ತಾರೆ. ಖಾಕಿ, ಖಾದಿಗಳಿಂದ ಇದಕ್ಕೆ ಪರಿಹಾರ ಸುಲಭವಾಗಿ ಸಿಗದು. ಹೀಗಾಗಿ ಸಮಾಜದಲ್ಲಿ ಪರಿವರ್ತನೆ ಮೂಡಿಸಬೇಕೆಂಬ ಉದ್ದೇಶದಿಂದ ಈ ಕಿರುಚಿತ್ರ ನಿರ್ಮಾಣ ಮಾಡಲಾಗಿದೆ. ಇದು ಸುಮಾರು 15 ನಿಮಿಷ ಅವಧಿಯದ್ದಾಗಿದೆ. ಮುಂದೆ ಇದೇ ಕತೆಯನ್ನು ಒಳಗೊಂಡು ಚಲನಚಿತ್ರ ನಿರ್ಮಿಸುವ ಉದ್ದೇಶ ಇದೆ ಎಂದು ತಿಳಿಸಿದರು.
ಚಿತ್ರದಲ್ಲಿ ನಟಿಸುತ್ತಿರುವ ‘ಡೋಲೊ-650’ ಟೋಲ್ ಖ್ಯಾತಿಯ ಶಶಿರೇಖಾ, ರವಿಕುಮಾರ್, ದರ್ಶನ್, ಸದಾ, ಕಿರಣ್ ಇತರರು ಇದ್ದರು.