

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸೃಜನಾ ರಂಗಮಂದಿರದಲ್ಲಿ ಅ. 22ರಂದು ಸಂಜೆ 6 ಗಂಟೆಗೆ ಭಾರತೀಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದೆ ಅಪೂರ್ವ ಗುರು ಅನ್ನಪೂರ್ಣಾದೇವಿ ಅವರ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಕಲಾವಿದ ವೈಭವ ಭಟ್ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಧ್ರುವತಾರೆ, ಗಾಯಕಿ ಅನ್ನಪೂರ್ಣಾದೇವಿ ಜನಿಸಿದ್ದು 1927ರ ಏಪ್ರಿಲ್ 17ರಂದು ಮಧ್ಯಪ್ರದೇಶದ ಮೈಹಾರನಲ್ಲಿ. ಅನ್ನಪೂರ್ಣಾದೇವಿ ಹಾಗೂ ಪಂ. ರವಿಶಂಕರ ಜೋಡಿಯ ಗಾಯನ ಖ್ಯಾತಿ ಪಡೆದಿತ್ತು. ಅನ್ನಪೂರ್ಣಾದೇವಿ ಸಿತಾರವಾದಕಿಯಾಗಿದ್ದರೂ ಬೀನಕರಿ ಶೈಲಿ ಸಂಗೀತದಲ್ಲಿ ಪಳಗಿದರು. ತಮ್ಮ ಜೀವಿತಾವಧಿಯಲ್ಲಿ ಶಿಷ್ಯರಿಂದ ಶುಲ್ಕ ಪಡೆಯದೆ ಸಂಗೀತ ಕಲಿಸಿದ್ದು ವಿಶೇಷ. ಇಂತಹವರ ನೆನಪಿಗೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಅನ್ನಪೂರ್ಣಾದೇವಿ ಪ್ರತಿಷ್ಠಾನ ವತಿಯಿಂದ ಸಾಕ್ಷ್ಯಚಿತ್ರ ನಿರ್ಮಿಸಿದ್ದು, ನಿರ್ಮಲಚಂದ್ರ ನಿರ್ದೇಶಿಸಿದ್ದಾರೆ. ಚಿತ್ರ ಪ್ರದರ್ಶನ ನಂತರ ಅನ್ನಪೂರ್ಣದೇವಿ ಶಿಷ್ಯರಾದ ಪಂ. ನಿತ್ಯಾನಂದ ಹಲ್ದಿಪುರ ಹಾಗೂ ನಿರ್ಮಲಚಂದ್ರ ಅವರೊಂದಿಗೆ ಸಂವಾದ ನಡೆಯಲಿದೆ. ಸಂಗೀತ ಅಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.