

ಮಂಡ್ಯ: ಮೌಢ್ಯತೆಯ ವಿರುದ್ಧ ಧ್ವನಿಯೆತ್ತಿ ವೈಚಾರಿಕತೆ ಪ್ರತಿಪಾದಿಸಿದ ಕುವೆಂಪು ಸದಾ ನೆನಪಿನಲ್ಲಿ ಉಳಿಯುತ್ತಾರೆ ಎಂದು ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಅಭಿಪ್ರಾಯಿಸಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನೆಲದನಿ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ’ಅಣ್ಣನ ನೆನಪು’ ಸಾಕ್ಷ್ಯ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಅಣ್ಣನ ನೆನಪು ಅನುಭವ ಆಗದಿರುವವರೇ ಇಲ್ಲ. ಏಕೆಂದರೆ ಯುಗದಕವಿ ಕುವೆಂಪು ಅವರು ಆ ಸ್ಥಾನದಲ್ಲಿ ಸದಾ ಹಸಿರಾಗಿ ನಿಲ್ಲುತ್ತಾರೆ ಎಂದರು.
ಕುವೆಂಪು ಅವರ ಸರಳ ವಿವಾಹ ಪ್ರೋತ್ಸಾಹದಿಂದಲೇ ರೈತ ಚಳವಳಿಯಲ್ಲಿ ಒಂದು ಭಾಗವಾಗಿ ಕಂಡಿತು. ಅವರ ವೈಚಾರಿಕತೆಯನ್ನು ಈಗಲೂ ನಾವು ಪಾಲಿಸುತ್ತಿದ್ದೇವೆ. ಸಂಪ್ರದಾಯ, ಮೌಢ್ಯತೆಯ ವಿರುದ್ಧವಾಗಿ ಬದುಕು ನಡೆಸುತ್ತಿರುವುದು ನಿಮ್ಮ ಮುಂದೆಯೇ ಸಾಕ್ಷಿ ಗುಡ್ಡೆಯಾಗಿಯೇ ಇದೆ. ಸಮಾಜ ದಿಕ್ಕು ತಪ್ಪಿ ಹೋಗುತ್ತಿದೆ ಎಂದರೆ ಇದರಲ್ಲಿ ನಾವು ಹಾದಿ ತಪ್ಪುತ್ತಿಲ್ಲ. ಆಳುವ ವ್ಯವಸ್ಥೆಯು ಪ್ರಜಾಪ್ರಭುತ್ವವನ್ನೇ ಮರೆತು ಮೌಢ್ಯತೆಯ ಮೂಲಕ ಅವರು ಹೇಳಿದ್ದೇ ಮಾತಾಗಿ ಹೋಗಿದೆ. ಇದರ ಬದಲಾವಣೆ ಆಗಬೇಕಾದರೆ ಇಂತಹ ನಾಟಕ ಪ್ರದರ್ಶನಗಳು ಬೆಳಕು ಚೆಲ್ಲುತ್ತವೆ ಎಂದು ಅಭಿಪ್ರಾಯಪಟ್ಟರು.
ಕೆಂಗೇರಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಉತ್ತರಾಧಿಕಾರಿ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಕವಿ ಕುವೆಂಪು ಅವರು ಪ್ರತಿಪಾದಿಸಿದ ಮನುಜ ಮತ ವಿಶ್ವ ಪಥ ಎಂಬ ಮಾತು ಇಂದಿಗೂ ಪ್ರಸ್ತುತವಾಗಿದೆ. ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವರಿಗೆ ಸನ್ಮಾನ ಮಾಡುತ್ತಿರುವುದು ಮೆಚ್ಚುವ ಕೆಲಸವಾಗಿದೆ. ಸಾಂಸ್ಕೃತಿಕ ಸಮಾರಂಭಕ್ಕ ಆಗಮಿಸಿ ನಾಟಕ ವೀಕ್ಷಣೆಗೆ ಆಗಮಿಸಿರುವ ಕಲಾಪ್ರೇಕ್ಷರಿಂದ ಇದೇರೀತಿ ಪ್ರೋತ್ಸಾಹ ಸಿಗಲಿ ಎಂದು ಆರೈಸಿದರು.
ನೆಲದನಿ ಬಳಗದ ಪ್ರಧಾನ ಪೋಷಕಿ ರುಕ್ಮಿಣಿ ಶಂಕರೇಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು, ಎಚ್.ಸಿ.ಮಂಜುನಾಥ್, ತಗ್ಗಹಳ್ಳಿ ವೆಂಕಟೇಶ್, ಮಂಗಲ ಲಂಕೇಶ್ ಇತರರಿದ್ದರು. ’ಅಣ್ಣನ ನೆನಪು’ ಸಾಕ್ಷ್ಯ ನಾಟಕವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.