ಉಪ ನೋಂದಣಿ ಕಚೇರಿಗೆ ಲೋಕಾಯುಕ್ತರ ದಿಢೀರ್ ಭೇಟಿ

hnl lokayukta 1 . june 17
Published on

ಹೊನ್ನಾಳಿ: ಪಟ್ಟಣದ ತಾಲೂಕು ಹಾಗೂ ಉಪ ನೋಂದಣಿ ಕಚೇರಿಗೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು.

ಇತ್ತೀಚಿಗೆ ದಾವಣಗೆರೆಗೆ ಆಗಮಿಸಿದ್ದ ಉಪ ಲೋಕಾಯುಕ್ತ ಹಾಗೂ ಹೊನ್ನಾಳಿಗೆ ಭೇಟಿ ನೀಡಿದ್ದ ದಾವಣಗೆರೆ ಲೋಕಾಯುಕ್ತ ಎಸ್ಪಿಗೆ, ಸರ್ಕಾರಿ ಕಚೇರಿಗಳಲ್ಲಿ ಸಕಾಲದಲ್ಲಿ ಕೆಲಸಗಳು ಆಗುತ್ತಿಲ್ಲ, ಪ್ರತಿಯೊಂದಕ್ಕೂ ಕಚೇರಿಗಳಿಗೆ ಅಲೆದಾಡಿಸುತ್ತಾರೆ ಎಂಬ ದೂರು ಸಾರ್ವಜನಿಕರಿಂದ ಬಂದಿದ್ದು, ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ಆದೇಶದ ಮೇರೆಗೆ ಲೋಕಾಯುಕ್ತ ಡಿವೈಎಸ್ಪಿ ಕಲಾವತಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಉಪನೋಂದಣಿ ಕಚೇರಿಗೆ ಹಾಗೂ ಲೋಕಾಯುಕ್ತ ಇನ್ಸ್​ಪೆಕ್ಟರ್ ಸರಳಾ ನೇತೃತ್ವದ ತಂಡ ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉಪನೋಂದಾಣಿಕಾರಿ ನವೀನ್​ಕುಮಾರ್ ಅವರು ಲೋಕಾಯುಕ್ತ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ ಪರಿಶೀಲನೆಗೆ ಕಡತಗಳನ್ನು ನೀಡಿದರು. ಈ ವೇಳೆ, ಕಚೇರಿ ಮಹಡಿಯಲ್ಲಿರುವ ಕಾರಣ ವೃದ್ಧರಿಗೆ, ಮಹಿಳೆಯರಿಗೆ ನೋಂದಣಿ ಕೆಲಸಕ್ಕೆ ಬರಬೇಕಾದರೆ ತೊಂದರೆಯಾಗುತ್ತಿಲ್ಲವೇ ಎಂದು ಲೋಕಾಯುಕ್ತ ಡಿವೈಎಸ್ಪಿ ಕಲಾವತಿ ಪ್ರಶ್ನಿಸಿದಾಗ ಉಪ ನೋಂದಣಾಧಿಕಾರಿ ಉತ್ತರಿಸಿ, ಈಗಾಗಲೇ ಕಟ್ಟಡ ಮಾಲೀಕರ ಬಳಿ ಈ ಕುರಿತು ರ್ಚಚಿಸಿದ್ದು, ಇಪ್ಪತ್ತು ದಿನಗಳೊಳಗಾಗಿ ಲಿಫ್ಟ್ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು. ಆಸ್ತಿ ನೋಂದಣಿಗೆ ಬರುವವರ ನಿಖರತೆಗಾಗಿ ಆಧಾರ್, ಪಾನ್ ಕಾರ್ಡ್​ನ್ನು ಪರಿಶೀಲಿಸಿ ನೋಂದಣಿ ಮಾಡಿಕೊಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಇನ್ಸ್​ಪೆಕ್ಟರ್ ಸರಳಾ ಅವರ ನೇತೃತ್ವದ ಅಧಿಕಾರಿಗಳ ತಂಡ ತಾಲೂಕು ಕಚೇರಿ, ವಿಶೇಷವಾಗಿ ಆಹಾರ ಶಾಖೆ, ದಾಖಲೆಗಳ ಶಾಖೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆಹಾರ ನಿರೀಕ್ಷಕರಿಂದ ಮಾಹಿತಿ ಪಡೆದರು. ಆಹಾರ ಶಾಖೆಯಲ್ಲಿ ಸಮರ್ಪಕವಾದ ದಾಖಲೆಗಳನ್ನು ನಿರ್ವಹಣೆ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಲೋಕಾಯುಕ್ತ ಸಿಬ್ಬಂದಿಯಾದ ಮಂಜುನಾಥ್, ಪ್ರಭು ಸುರೇನಾ, ಸಂತೋಷ್, ಬಸವರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net