ಪಾಳಿವಾರು ವೈದ್ಯರು ಕೆಲಸ ಮಾಡಿ

CTD 11 Visit
Published on

ಚಿತ್ರದುರ್ಗ: ಜಿಲ್ಲಾಸ್ಪತ್ರೆಯಲ್ಲಿ ವಾರಾಂತ್ಯದ ರಜೆ ದಿನ ಮತ್ತು ಕೆಲವೊಮ್ಮೆ ರಾತ್ರಿ ವೇಳೆ ತುರ್ತು ಸಂದರ್ಭ ಎದುರಾದರೆ ತಜ್ಞ ವೈದ್ಯರು ಇರುವುದಿಲ್ಲ. ಕರೆ ಸ್ವೀಕರಿಸುವುದಿಲ್ಲ. ಬಡವರಾದ ನಾವು ಈ ಆಸ್ಪತ್ರೆಯನ್ನೇ ಅವಲಂಬಿಸಿದ್ದೇವೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರ ಎದುರು ಸಾರ್ವಜನಿಕರು ಅಳಲು ತೋಡಿಕೊಂಡರು.

ತಕ್ಷಣ ಗರಂ ಆದ ನ್ಯಾಯಮೂರ್ತಿ, ಪಾಳಿವಾರು ವೈದ್ಯರು ಕೆಲಸ ಮಾಡಲು ಕ್ರಮವಹಿಸಿ ಎಂದು ಸ್ಥಳದಲ್ಲಿದ್ದ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚಿಸಿದರು.

ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ ಸೇರಿ ಯಾವುದೇ ವಿಭಾಗವಾಗಲಿ ಒಳರೋಗಿ ಮತ್ತು ಹೊರರೋಗಿಗಳಿಗೆ ಚಿಕಿತ್ಸೆಗಾಗಿ ನೀಡುವ ಔಷಧಗಳ ದಾಖಲಾತಿಯನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಹೇಳಿದರು.

ಸರ್ಕಾರದಿಂದ ಎಷ್ಟು ಪ್ರಮಾಣದಲ್ಲಿ ಔಷಧ ಸರಬರಾಜಾಗಿದೆ. ನಿತ್ಯ ಎಷ್ಟು ಖಾಲಿಯಾಗುತ್ತಿವೆ ಎಂಬುದನ್ನು ದಾಖಲಿಸದಿದ್ದರೆ, ಕೆಲವರು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಸೂಚಿಸಿದ ಅವರು, ಕವಾಡಿಗರಹಟ್ಟಿ ಪ್ರಕರಣ ನಿಭಾಯಿಸಿದ ವೈದ್ಯರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಡಿಸಿ ದಿವ್ಯಾಪ್ರಭು, ಲೋಕಾಯುಕ್ತ ಎಸ್‌ಪಿ ವಾಸುದೇವರಾಮ್, ಎಡಿಸಿ ಕುಮಾರಸ್ವಾಮಿ, ಎಸಿ ಎಂ.ಕಾರ್ತಿಕ್, ಡಿಎಚ್‌ಒ ಡಾ.ಆರ್.ರಂಗನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದೇವರಾಜ್ ಇತರರಿದ್ದರು.

ವಸತಿನಿಲಯಕ್ಕೆ ಭೇಟಿ: ಬಿಸಿಎಂ ಇಲಾಖೆಯ ಡಿ.ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೇಶದ ಆಧಾರ ಸ್ತಂಭವಾಗಿರುವ ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ರಕ್ಷಣೆ ದೃಷ್ಟಿಯಿಂದ ಕಡ್ಡಾಯವಾಗಿ ಯೋಗ-ಧ್ಯಾನ, ಕರಾಟೆ ಕಲಿಸಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net