ಸಮಯ ಪಾಲನೆ ಮಾಡದ ವೈದ್ಯರು

13 SARAG 3
Published on

ಸರಗೂರು: ತಾಲೂಕಿನ ಬಡಗಲಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ತೊಂದರೆಯಾಗಿದ್ದು, ಸರ್ಕಾರಿ ಆಸ್ಪತ್ರೆ ಇದ್ದರೂ ಖಾಸಗಿ ಆಸ್ಪತ್ರೆಗೆ ಹೋಗುವುದು ತಪ್ಪಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯ ವೈದ್ಯರು ಸಾರ್ವಜನಿಕರ ಸೇವೆ ಮಾಡಲು ನಿರ್ಲಕ್ಷೃ ಮಾಡುತ್ತಿದ್ದು, ಮಕ್ಕಳು, ಬಾಣಂತಿಯರು ಮತ್ತು ವೃದ್ಧರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ವೈದ್ಯರು ಈ ರೀತಿ ನಿರ್ಲಕ್ಷೃ ವಹಿಸಿದರೆ ಚಿಕಿತ್ಸೆ ಪಡೆಯುವುದಾದರೂ ಹೇಗೆ ಎನ್ನುವುದು ಈ ಭಾಗದ ಜನರ ಪ್ರಶ್ನೆಯಾಗಿದೆ.
ಸರಗೂರು ತಾಲೂಕಿನ ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಲಗಪುರ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಮನೋಹರ್ ಅವರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬರುವುದಿಲ್ಲ. ಕಾಟಾಚಾರಕ್ಕೆ ಎಂಬಂತೆ ಬಂದು ಹೋಗುತ್ತಿದ್ದಾರೆ ಎಂದು ಸುತ್ತಮುತ್ತಲ ಗ್ರಾಮಸ್ಥರು ಆರೋಪಿಸಿದ್ದಾರೆ.

ಬೆಳಗ್ಗೆ 10 ರಿಂದ 11 ಗಂಟೆ ಒಳಗೆ ಬರಬೇಕಾದ ವೈದ್ಯರು, ಮಧ್ಯಾಹ್ನದ ಊಟದ ಸಮಯಕ್ಕೆ ಬರುತ್ತಾರೆ. ತಡವಾಗಿ ಬಂದರೂ ಯಾವುದೇ ರೋಗಿಗಳ ತಪಾಸಣೆ ಮಾಡದೆ ತಾಲೂಕು ಮಟ್ಟದ ವೈದ್ಯರು ಹಾಗೂ ಖಾಸಗಿ ಆಸ್ಪತ್ರೆಗೆ ಚೀಟಿ ಬರೆದು ಕಳಿಸುತ್ತಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಹೊರರೋಗಿಗಳ ವಿಭಾಗದಲ್ಲೂ ಸಕಾಲಕ್ಕೆ ಚಿಕಿತ್ಸೆ ಲಭ್ಯವಿಲ್ಲ. ರೋಗಿಗಳಿಗೆ ಯಾವುದೇ ಚಿಕಿತ್ಸೆಯನ್ನು ನೀಡದೆ ಹೆಚ್ಚಾಗಿ ಖಾಸಗಿ ಆಸ್ಪತ್ರೆಗೆ ಹೋಗುವಂತೆ ಹೇಳಿ ಕಳಿಸುತ್ತಿದ್ದಾರೆ. ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಗ್ರಾಮಗಳ ಜನರಿಗೆ ಉತ್ತಮವಾದ ಸೇವೆ ನೀಡಲು ಇಲ್ಲಿನ ವೈದ್ಯರಿಂದ ಸಾಧ್ಯವಾಗುತ್ತಿಲ್ಲ. ಡೆಂೆ, ಚಿಕೂನ್ ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net