

ಕಾರವಾರ: ಕೊಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಕೊಲೆ ಪ್ರಕರಣವನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ(ಐಎಂಎ) ನೀಡಿದ ಬಂದ್ ಕರೆಗೆ ಜಿಲ್ಲೆಯಲ್ಲೂ ವ್ಯಾಪಕ ಸ್ಪಂದನೆ ವ್ಯಕ್ತವಾಯಿತು.
ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ ಹೊರ ರೋಗಿ ವಿಭಾಗಗಳು ಶನಿವಾರ ಬಂದ್ ಆಗಿದ್ದವು. ತುರ್ತು ಚಿಕಿತ್ಸೆ ಹಾಗೂ ಒಳ ರೋಗಿ ವಿಭಾಗಗಳು ಎಂದಿನಂತೆ ನಡೆದವು.
ಕಾರವಾರ ಐಎಂಎ ನೇತೃತ್ವದಲ್ಲಿ ನೂರಕ್ಕೂ ಅಧಿಕ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ನರ್ಸ್ ಗಳು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಜಿಲ್ಲಾಧಿಕಾರಿ, ಕೆ.ಲಕ್ಷ್ಮೀಪ್ರಿಯಾ ಅವರ ಮೂಲಕ ತಮ್ಮ ಒತ್ತಾಯ ಪತ್ರವನ್ನು ಸಲ್ಲಿಸಿದರು.
ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು. ಇದಕ್ಕಾಗಿ ಪ್ರತ್ಯೇಕ ಕಾಯಿದೆ ರೂಪಿಸಬೇಕು ಎಂದು ಒತ್ತಾಯಿಸಲಾಗಿದೆ.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಎಂಎ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಸುರೇಶ ಭಟ್, ಆರೋಗ್ಯ ವೃತ್ತಿಪರರಿಗೆ ಖಾಸಗಿ ಆಸ್ಪತ್ರೆಯಲ್ಲಿರುವ ಸುರಕ್ಷಿತಾ ವಾತಾವರಣ ಸರ್ಕಾರಿ ಆಸ್ಪತ್ರೆಗಳಲ್ಲಿ ಇಲ್ಲ. 100 ವರ್ಷಕ್ಕೂ ಅಧಿಕ ಇತಿಹಾಸವಿರುವ ಕೋಲ್ಕತ್ತಾ ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹ ಘಟನೆ ನಡೆದಿರುವುದು ದುರಂತ. ಖಂಡನೀಯ ಎಂದರು.
ನರ್ಸ್ ಗಳಿಗೆ ಶೌಚಗೃಹ ಸೌಲಭ್ಯವಿಲ್ಲ. ಪ್ರತ್ಯೇಕ ಕೊಠಡಿಗಳಿಲ್ಲ. ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ವೈದ್ಯಕೀಯ ಸಿಬ್ಬಂದಿ ಹಾಗೂ ವೈದ್ಯಕೀಯ ವಿದ್ಯಾರ್ಥಿನಿಯರಿಗೆ ಸಮಸ್ಯೆ ಆಗದಂತೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ನಿಯಮದಂತೆ ಪ್ರತಿ ಜಿಲ್ಲಾಸ್ಪತ್ರೆಯಲ್ಲಿ 40, ತಾಲೂಕು ಆಸ್ಪತ್ರೆಯಲ್ಲಿ ತಲಾ 12 ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ ಎರಡರಂತೆ ಭದ್ರತಾ ಸಿಬ್ಬಂದಿಗಳನ್ನು ಕಡ್ಡಾಯವಾಗಿ ನೇಮಿಸಬೇಕು. ಜತೆಗೆ ತಾಲೂಕಾಸ್ಪತ್ರೆಯಲ್ಲಿ 24×7 ಕಾರ್ಯನಿರ್ವಹಿಸಲು ಒಬ್ಬ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದರು.
ಕ್ರಿಮ್ಸ್ ವೈದ್ಯಕೀಯ ಸೂಪರಿಟೆಂಡೆಂಟ್ ಡಾ. ಶಿವಾನಂದ ಕುಡ್ತಲಕರ್, ರಾಜ್ಯ ವೈದ್ಯಕೀಯ ಸಿಬ್ಬಂದಿ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ನರೇಂದ್ರ ಪವಾರ, ಡಾ. ಶರದ ಕೋಲ್ವೇಕರರ್, ಡಾ. ಕೀರ್ತಿ ನಾಯ್ಕ, ಡಾ.ಸುಷ್ಮಾ, ಡಾ.ಸವಿತಾ, ಡಾ.ಶೃತಿ ಎಚ್. ಇತರರು ಇದ್ದರು.
.