

ಬೆಂಗಳೂರು: ಇಎಸ್ಐ ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಂದ ಪದವಿ ಬಳಿಕ ಇಎಸ್ಐ ಆಸ್ಪತ್ರೆಗಳಲ್ಲಿ 5 ವರ್ಷ ಕಡ್ಡಾಯ ಸೇವೆ ಸಲ್ಲಿಸುವ ಸಂಬಂಧ ‘ಸರ್ವೀಸ್ ಬಾಂಡ್’ (ಸೇವಾ ಒಪ್ಪಂದ) ಪಡೆಯುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕಡ್ಡಾಯ ಸೇವೆ ಸಲ್ಲಿಸುವ ಸಂಬಂಧ ಇಎಸ್ಐ ಹೊರಡಿಸಿದ್ದ ಆದೇಶ ರದ್ದುಪಡಿಸುವಂತೆ ಕೋರಿ ಪೂರ್ಣಿಮಾ ನಾಗ್ ಸೇರಿ 24 ವೈದ್ಯ ಅಭ್ಯರ್ಥಿಗಳು 2018ರಲ್ಲಿ ಸಲ್ಲಿಸಿದ್ದ ಅರ್ಜಿಗಳನ್ನು ಇತ್ತೀಚೆಗೆ ಮಾನ್ಯ ಮಾಡಿರುವ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠ, ಈ ತೀರ್ಪು ನೀಡಿದೆ.
ಅರ್ಜಿದಾರರಿಗೆ ಇಎಸ್ಐ ಆಸ್ಪತ್ರೆಯಲ್ಲಿ 5 ವರ್ಷ ಕಡ್ಡಾಯ ಸೇವೆ ಸಲ್ಲಿಸಲು ಸೂಚಿಸಿ 2018ರ ಜು.3ರಂದು ಇಎಸ್ಐ ಹೊರಡಿಸಿದ ಆದೇಶಗಳನ್ನು ರದ್ದುಪಡಿಸಿರುವ ಹೈಕೋರ್ಟ್, ಕಡ್ಡಾಯ ಸೇವಾ ಜವಾಬ್ದಾರಿಯಿಂದ ಅರ್ಜಿದಾರರನ್ನು ಕೂಡಲೇ ಬೇಷರತ್ ಆಗಿ ಬಿಡುಗಡೆ ಮಾಡಬೇಕು. ಸೇವಾ ಒಪ್ಪಂದಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಮತ್ತವರ ಪಾಲಕರ ಮೇಲೆ ಯಾವುದೇ ಹೊಣೆಗಾರಿಕೆ ಇಲ್ಲ ಎಂದು ಸ್ಪಷ್ಟಪಡಿಸಿ ಮುಚ್ಚಳಿಕೆ ನೀಡಬೇಕು ಎಂದು ನಿರ್ದೇಶಿಸಿದೆ.
ತೀರ್ಪಿನಲ್ಲೇನಿದೆ?: ವಿದ್ಯಾರ್ಥಿಗಳೊಂದಿಗೆ ಇಎಸ್ಐ ಮಾಡಿಕೊಂಡಿರುವ ಸೇವಾ ಒಪ್ಪಂದ ಸಂವಿಧಾನದಲ್ಲಿ ಕಲ್ಪಿಸಲಾಗಿರುವ ವೃತ್ತಿ ಹಕ್ಕು ಮತ್ತು ವೃತ್ತಿ ಆಯ್ಕೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಜೀತ ಪದ್ಧತಿ ನಿಷೇಧ ಆಶಯಕ್ಕೆ ಧಕ್ಕೆ ಉಂಟು ಮಾಡಿದಂತಿದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಪ್ರಕರಣವೇನು?: ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2012-13ನೇ ಸಾಲಿನಲ್ಲಿ ಅರ್ಜಿದಾರರಿಗೆ ಇಎಸ್ಐ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಹಂಚಿಕೆ ಮಾಡಿತ್ತು. ಪ್ರವೇಶದ ವೇಳೆ, ಪದವಿ ಬಳಿಕ 5 ವರ್ಷ ಕಾಲ ಇಎಸ್ಐ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸುವ ಸಂಬಂಧ ಸರ್ವೀಸ್ ಬಾಂಡ್ ಪಡೆಯಲಾಗಿತ್ತು. ಪದವಿ ಪೂರ್ಣಗೊಳಿಸಿದ ಬಳಿಕ 2018ರಲ್ಲಿ ಇಎಸ್ಐ ಆಸ್ಪತ್ರೆಯಲ್ಲಿ ವೃತ್ತಿ ನಿರ್ವಹಿಸುವಂತೆ ಸೂಚಿಸಿ ಅರ್ಜಿದಾರರಿಗೆ ಇಎಸ್ಐ ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.