ಮಹಿಳೆ ದೇಹದಲ್ಲಿ ಉಳಿದಿದ್ದ ಪಿತ್ತಕೋಶದ ಸ್ಟಂಟ್ ಹೊರತೆಗೆದ ವೈದ್ಯರು

Published on

ಮೈಸೂರು: ಶಸ್ತ್ರಚಿಕಿತ್ಸೆ ನಡೆಸುವಾಗ ದೇಹದಲ್ಲಿಯೇ ಆಕಸ್ಮಿಕವಾಗಿ ಉಳಿದಿದ್ದ ಪಿತ್ತಕೋಶದ ಸ್ಟಂಟ್ ಅನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿದೆ ಎಂದು ನಗರದ ಎನ್‌ಜೆ ಆಸ್ಪತ್ರೆ ವೈದ್ಯ ಡಾ.ಸುದೀಶ್ ದುರ್ಗೇಶ್ ತಿಳಿಸಿದರು.
ತಮಿಳುನಾಡು ಮೂಲದ ಮಹಿಳೆಯೊಬ್ಬರು ತೀವ್ರ ಅನಾರೋಗ್ಯ ಕಾರಣ ದಾಖಲಾದಾಗ ಅವರು ಈ ಹಿಂದೆ ಸ್ಥಳೀಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ವೇಳೆ ಪಿತ್ತಕೋಶ ತೆಗೆಯುವ ಸಂದರ್ಭದಲ್ಲಿ ಅಳವಡಿಸಿದ್ದ ಸ್ಟಂಟ್ ಹಾಗೆಯೇ ಉಳಿದುಕೊಂಡಿದ್ದನ್ನು ಪತ್ತೆಹಚ್ಚಲಾಯಿತು. ಇದೇ ವೇಳೆ ಸ್ಟಂಟ್ ಜತೆಗೆ ಸಿಸ್ಟ್ ಸಮಸ್ಯೆಗೆ ಶಸ್ತ್ರಚಿಕಿತ್ಸೆ ನಡೆಸಿ ಗುಣಪಡಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹಿಳೆಗೆ ಸುಮಾರು 18-19 ವರ್ಷ ಹಿಂದೆ ಪಿತ್ತಕೋಶ ತೆಗೆಯುವ ಶಸ್ತ್ರಚಿಕಿತ್ಸೆ ನೆರವೇರಿಸಿದಾಗ ತಾತ್ಕಾಲಿಕವಾಗಿ ಪಿತ್ತರಸದ ಸ್ಟಂಟ್ ಅಳವಡಿಸಲಾಗಿತ್ತು. ಆ ವಿಷಯವನ್ನು ಮಹಿಳೆಗೆ ಯಾರೂ ತಿಳಿಸಿರಲಿಲ್ಲ. ಹೀಗಾಗಿ ಇದರ ಅರಿವು ಅವರಿಗೆ ಬಾರದೇ ಇಷ್ಟೂ ವರ್ಷ ಅದನ್ನು ತೆಗೆಸದೆ ಇದ್ದ ಕಾರಣ ಸಿಸ್ಟ್ ಹಾಗೂ ಇನ್ನಿತರ ಉದರ ಸಂಬಂಧಿ ಸಮಸ್ಯೆಯಿಂದ ಬಳಲುತ್ತ, ಎಲ್ಲೇ ಚಿಕಿತ್ಸೆ ಪಡೆದರೂ ಗುಣವಾಗದೆ ಸಮಸ್ಯೆ ಎದುರಿಸುತ್ತಿದ್ದರು ಎಂದು ವಿವರಿಸಿದರು.
ವೈದ್ಯರಾದ ಡಾ.ಸತೀಶ್, ಡಾ.ಮಮತಾ, ಆಸ್ಪತ್ರೆ ನಿರ್ದೇಶಕ ಡಾ.ದುರ್ಗೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net