ಮೈಸೂರು: ಮೂತ್ರಪಿಂಡ ಉಳಿಸಿಕೊಂಡೇ ಸುಮಾರು 45 ವರ್ಷದ ಮಹಿಳೆಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಮೂತ್ರಪಿಂಡದಲ್ಲಿದ್ದ ಗಡ್ಡೆ ತೆಗೆಯಲಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ಮೂತ್ರರೋಗ ಶಾಸ್ತ್ರಜ್ಞ ಡಾ.ಕೆ.ಎ.ತಿಮ್ಮಯ್ಯ ತಿಳಿಸಿದರು.
ಮೂತ್ರಪಿಂಡದಲ್ಲಿ ಗಡ್ಡೆ ಇದ್ದಾಗ ಮೂತ್ರಪಿಂಡವನ್ನು ತೆಗೆಯುವ ಅನಿವಾರ್ಯತೆ ಉಂಟಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಮೂತ್ರಪಿಂಡ ಉಳಿಸಿಕೊಂಡೇ ಯಶಸ್ವಿಯಾಗಿ ಗೆಡ್ಡೆ ತೆಗೆಯಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹಿಳೆಯ ಮೂತ್ರಪಿಂಡದಲ್ಲಿ ಸುಮಾರು 7 ಸೆಂಟಿಮೀಟರ್ ಗಾತ್ರದ ಮೂತ್ರಪಿಂಡದಷ್ಟೇ ದೊಡ್ಡದಾದ ಗಡ್ಡೆ ಬೆಳೆದಿತ್ತು. ಇದು ಕ್ಯಾನ್ಸರ್ ಗಡ್ಡೆಯಾಗಿರದಿದ್ದರೂ ಅದನ್ನು ಹೊರ ತೆಗೆಯುವ ವೇಳೆ ಮೂತ್ರಪಿಂಡಕ್ಕೂ ಅಪಾಯವಾಗುವ ಸಾಧ್ಯತೆ ಇತ್ತು ಎಂದರು.
ಹೀಗಾಗಿ ಸಾಂಪ್ರದಾಯಿಕ ತೆರೆದ ಶಸ್ತ್ರಚಿಕಿತ್ಸಾ ವಿಧಾನ ಬಳಸದೆ ಕನಿಷ್ಠ ಆಘಾತಕಾರಿಯಾದ ಲ್ಯಾಪ್ರೋಸ್ಕೋಪಿಕ್ ವಿಧಾನದ ಮೂಲಕ ಸುಮಾರು ಮೂರೂವರೆ ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆ ಹೊರ ತೆಗೆಯಲಾಗಿದೆ ಎಂದು ವಿವರಿಸಿದರು.
ಸಾಮಾನ್ಯವಾಗಿ ಗರ್ಭಿಣಿಯಾಗಿರುವ ವೇಳೆ ಹಲವರಲ್ಲಿ ಈ ರೀತಿಯ ಗಡ್ಡೆ ಕಾಣಿಸಿಕೊಳ್ಳುತ್ತದೆ. ಆದರೆ ಈ ಮಹಿಳೆ ಗರ್ಭಿಣಿ ಆಗಿರದಿದ್ದರೂ ಸಮಸ್ಯೆಯುಂಟಾಗಿತ್ತು. ನೋವಿನ ಕಾರಣದಿಂದ ಆಸ್ಪತ್ರೆಗೆ ಬಂದಾಗ ಸಮಸ್ಯೆ ಪತ್ತೆಹಚ್ಚಲಾಯಿತು. ಜತೆಗೆ ಇದು ಕ್ಯಾನ್ಸರ್ ಗಡ್ಡೆಯಲ್ಲ ಎಂಬುದನ್ನೂ ಖಚಿತ ಪಡಿಸಿಕೊಂಡು ತಕ್ಕ ಚಿಕಿತ್ಸೆ ನೀಡಲಾಯಿತು. ಈಗ ಆಕೆ ಗುಣಮುಖರಾಗಿದ್ದಾರೆ. ಈ ರೀತಿಯ ಪ್ರಕರಣಗಳು ಅಪರೂಪದ್ದಾಗಿವೆ ಎಂದು ಮಾಹಿತಿ ನೀಡಿದರು.