ವೈದ್ಯರ ಮೇಲೆ ಹಲ್ಲೆ, ಸೂಕ್ತ ಕ್ರಮಕ್ಕೆ ಒತ್ತಾಯ

01
Published on

ಚಿಕ್ಕೋಡಿ: ಯಕ್ಸಂಬಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರತ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದವನ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಅವರಿಗೆ ತಾಲೂಕು ವೈದ್ಯಾಧಿಕಾರಿ ಡಾ. ವಿ.ವಿ. ಶಿಂಧೆ ನೇತೃತ್ವದಲ್ಲಿ ಸಿಬ್ಬಂದಿ ಮಂಗಳವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.

ಸೋಮವಾರ ಸಂಜೆ ಯಕ್ಸಂಬಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕುಡಿದ ಅಮಲಿನಲ್ಲಿ ಕೈಗೆ ಗಾಯಮಾಡಿಕೊಂಡು ಬಂದ ಶಮನೇವಾಡಿಯ ಸಂಜೀವಕುಮಾರ ಬನವಣಿ ಎಂಬುವರು ಚಿಕಿತ್ಸೆ ನೀಡುವಾಗ ಕರ್ತವ್ಯ ನಿರತ ವೈದ್ಯಾಧಿಕಾರಿ ಡಾ. ಮಲ್ಲಿಕಾರ್ಜುನ ಪೋಗತ್ಯಾನಟ್ಟಿ ಅವರ ಶರ್ಟ್ ಹಿಡಿದು ಕುತ್ತಿಗೆ ಹಿಸುಕಿ ಹಲ್ಲೆ ಮಾಡಿದ್ದಲ್ಲದೆ, ನರ್ಸ್ ದೀಪಾ ಕಟ್ಟಿಮನಿ ಹಾಗೂ ಸಿಬ್ಬಂದಿಗೆ ಅವಾಚ್ಯವಾಗಿ ನಿಂದನೆ ಮಾಡಿ ಆಸ್ಪತ್ರೆಯ ಉಪಕರಣ ಹಾಗೂ ಔಷಧಗಳನ್ನು ನಾಶಪಡಿಸಿದ್ದಾನೆ.

ಈ ಘಟನೆಯಿಂದ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಭಯಗೊಂಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಹಾಗೂ ಕೋವಿಡ್- 19 ಸೇವೆಯನ್ನು ಒದಗಿಸಲು ಅಡಚಣೆ ಆಗುತ್ತಿದೆ. ಆದ್ದರಿಂದ ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಿ ಸಂಜೀವಕುಮಾರ ಬನವಣಿ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿ ಸಿಬ್ಬಂದಿಗೆ ರಕ್ಷಣೆ ನೀಡಬೇಕು. ಆರೋಗ್ಯ ಕೇಂದ್ರಗಳಿಗೆ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಮನವಿ ಮೂಲಕ ಆಗ್ರಹಿಸಿದ್ದಾರೆ.

ಎಡಿಎಚ್‌ಒ ಡಾ. ಶೈಲಜಾ ತಮ್ಮಣ್ಣವರ, ಡಾ.ವಿ.ವಿ. ಶಿಂಧೆ, ಡಾ. ಸಂತೋಷ ಕೊಣ್ಣುರಿ, ಮಲ್ಲಿಕಾರ್ಜುನ ಪೋಗತ್ಯಾನಟ್ಟಿ, ದೀಪಾ ಕಟ್ಟಿಮನಿ, ಡಾ. ಶಾಂತಾರಾಮ ಬಾಗೇವಾಡಿ, ಸಂತೋಷ ಪತ್ತಾರ, ಲಕ್ಷ್ಮೀಕಾಂತ ಕಡ್ಲೆಪ್ಪಗೋಳ, ಡಾ. ವಿಶಾಲ ಹಡಪದ, ಡಾ. ಶ್ರೀನಿವಾಸ ನಾಯಕ್, ಜಗದೀಶ ಹುಲಕುಂದ, ವಿ.ವೈ. ನಾಯ್ಕರ್, ಕೆ.ಆರ್. ಕಾಂಬಳೆ, ಎ.ಕೆ. ಜೊಲ್ಲೆ, ಸೋಮನಾಥ ಪೂಜಾರಿ, ಯಮನಪ್ಪ ಹುನಕುಂದ, ಎಸ್.ಜಿ. ಕುಲರ್ಣಿ, ಬಿ.ಎ. ಕುಂಬಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net