ವೈದ್ಯರಾದವರಿಗೆ ಸಹಾನುಭೂತಿ ಅಗತ್ಯ ; ಎಂಎಸ್​ಆರ್ ಘಟಿಕೋತ್ಸವದಲ್ಲಿ ಪದ್ಮಶ್ರೀ ಡಾ.ರವಿ ಕಣ್ಣನ್ ಸಲಹೆ

msr
Published on

ಬೆಂಗಳೂರು: ವೈದ್ಯಕೀಯ ವೃತ್ತಿ ಬೇರೆಲ್ಲ ವೃತ್ತಿಗಳಂತಲ್ಲ. ಇದು ಒಂದು ಉನ್ನತವಾದ ವೃತ್ತಿ. ವೈದ್ಯರಾದವರಿಗೆ ಸಹಾನುಭೂತಿ ಇರಬೇಕು ಎಂದು ಪದ್ಮಶ್ರೀ ಡಾ. ಆರ್.ರವಿ ಕಣ್ಣನ್ ಹೇಳಿದ್ದಾರೆ. ರಾಮಯ್ಯ ವೈದ್ಯಕೀಯ ಕಾಲೇಜಿನ ಶುಕ್ರವಾರ ನಡೆದ 41ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ವೈದ್ಯರಾದವರು ಕೇವಲ ಯಾಂತ್ರಿಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ವೈದ್ಯರುಗಳು ಮಾನವೀಯತೆಯನ್ನು ರೂಡಿಸಿಕೊಂಡಿರಬೇಕು. ಇದರಿಂದ ಪ್ರತಿಯೊಬ್ಬ ರೋಗಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಲು ಸಹಾಯವಾಗುತ್ತದೆ. ಕೇವಲ ಪದವಿಯನ್ನು ಪಡೆದು ಅಲ್ಲಿಗೆ ಸುಮ್ಮನಾಗಬಾರದು. ಪ್ರತಿಯೊಬ್ಬ ವೈದ್ಯಕೀಯ ವಿದ್ಯಾರ್ಥಿಗಳು ಹೊಸ ಹೊಸ ಆವಿಷ್ಕಾರಕ್ಕೆ ತಮ್ಮನ್ನು ತೊಡಗಿಸಿಕೊಳ್ಳಬೇಕು. ಆ ಮೂಲಕ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡಲು ನೆರವಾಗುತ್ತದೆ ಎಂದು ಹೇಳಿದರು. ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ಈ ವರ್ಷ ವೈದ್ಯ ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ, ಪದವಿಯನ್ನು ಪಡೆಯಲು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳನ್ನು ತಿಳಿಸಿದರು. ಸಮಾರಂಭದಲ್ಲಿ ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾನಿಲಯ ಕುಲಪತಿ ಡಾ. ಎಂ.ಆರ್ ಜಯರಾಂ ಟ್ರಸ್ಟಿ ಎಂ.ಆರ್ ಸಂಪಂಗಿರಾಮ್, ಮುಖ್ಯ ಕಾರ್ಯನಿರ್ವಾಹಕ ಎಂ.ಆರ್.ಶ್ರೀನಿವಾಸಮೂರ್ತಿ, ಪ್ರಾಂಶುಪಾಲರಾದ ಡಾ. ಶಾಲಿನಿ ಎಸ್. ನೂಯಿ, ವಿವಿ ಉಪಕುಲಪತಿ ಪ್ರೊ. ಕೆ.ಕೆ ರೈನಾ, ರಿಜಿಸ್ಟ್ರಾರ್‌ಗಳಾದ ಡಾ. ಪ್ರತಾಬ್, ಡಾ. ಹೇಮಂತ್ ಮತ್ತಿತರರಿದ್ದರು.

332 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ:

ಘಟಿಕೋತ್ಸವದಲ್ಲಿ 154 ವೈಯಕೀಯ ವಿದ್ಯಾರ್ಥಿಗಳು, 136 ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ 42 ಫಿಸಿಯೋತೆರಪಿ ವಿದ್ಯಾರ್ಥಿಗಳು ಸೇರಿ ಒಟ್ಟು 332 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ರ‌್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಕುಲಪತಿ ಡಾ. ಎಂ.ಆರ್ ಜಯರಾಂ ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net