ಕನ್ನಡದಲ್ಲಿಯೇ ವೈದ್ಯರ ಔಷಧ ಚೀಟಿ: ವಿಸ್ತೃತ ಚರ್ಚೆ ಅಗತ್ಯ ಎಂದ ಸಚಿವ ದಿನೇಶ್ ಗುಂಡೂರಾವ್

Dinesh gundurao
Published on

ಬೆಂಗಳೂರು: ವೈದ್ಯರು ಕನ್ನಡದಲ್ಲಿ ಔಷಧ ಚೀಟಿ ಬರೆಯುವುದನ್ನು ಕಡ್ಡಾಯಗೊಳಿಸುವ ವಿಚಾರದಲ್ಲಿ ಸಾಕಷ್ಟು ತಾಂತ್ರಿಕ ಸಂಗತಿಗಳು ಮಿಳಿತವಾಗಿವೆ. ಹಾಗಾಗಿ ಕನ್ನಡದಲ್ಲಿ ವೈದ್ಯಕೀಯ ವ್ಯವಹಾರ ಅನುಷ್ಠಾನದ ಪೂರ್ವದಲ್ಲಿ ಅದರ ಸಾಧಕ ಬಾಧಕಗಳ ಕುರಿತು ವಿಸ್ತೃತ ಚರ್ಚೆಯ ಅಗತ್ಯವಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಸರ್ಕಾರಿ ವೈದ್ಯರು ಕನ್ನಡದಲ್ಲಿಯೇ ಔಷಧ ಚೀಟಿ ಬರೆಯಲು ಶೀಘ್ರ ಆದೇಶ ಹೊರಡಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ದಿನೇಶ್ ಗುಂಡೂರಾವ್ ಅವರಿಗೆ ಸೆ. 9ರಂದು ಪತ್ರದ ಮೂಲಕ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿರುವ ಸಚಿವರು ಆದೇಶ ಜಾರಿಗೆ ಇರುವ ಸಮಸ್ಯೆಗಳ ಕುರಿತು ಪತ್ರದ ಮೂಲಕ ಹೇಳಿದ್ದಾರೆ.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ವೈದ್ಯರು, ರೋಗಿಗಳು, ಶುಶ್ರೂಷಕರು, ಔಷಧ ವರ್ತಕರು ಕನ್ನಡವನ್ನು ಸರಿಯಾಗಿ ಅರ್ಥೈಸಿಕೊಳ್ಳುವುದರಲ್ಲಿ ಎಡವಿದರೆ ರೋಗಿಗಳ ಜೀವನ್ಮರಣದ ಪ್ರಶ್ನೆ ಉದ್ಭವಿಸುವ ಸಾಧ್ಯತೆಯೂ ಇದೆ. ಜನರ ಆರೋಗ್ಯವನ್ನು ಕಾಯುವ ವೈದ್ಯಕೀಯ ವಿಜ್ಞಾನ ಕ್ಷೇತ್ರ ಅತ್ಯಂತ ವಿಶಾಲ ಮತ್ತು ಸಂಕೀರ್ಣವಾಗಿದ್ದು, ಪ್ರಮುಖ ಬದಲಾವಣೆಗಳ ಮುನ್ನ ಎಲ್ಲ ಭಾಗಿದಾರರ ಜತೆಗೆ ಸಂವಾದ ಅಗತ್ಯ. ಇದು ಕೇವಲ ಒಂದು ಆದೇಶದ ಮೂಲಕ ಜಾರಿಗೊಳಿಸುವ ವಿಚಾರವಲ್ಲ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net