

ಗದಗ: ಅಗತ್ಯ ವೈದ್ಯರು ಮತ್ತು ಸಿಬ್ಬಂದಿ ಇಲ್ಲದೆ ಜಿಲ್ಲಾ ಪಶುಪಾಲನೆ ಮತ್ತು ವೈದ್ಯಕೀಯ ಇಲಾಖೆ ಪರದಾಡುವಂತಾಗಿದೆ. ಅನಾರೋಗ್ಯ ಪೀಡಿತ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸಿಗದೆ ನರಳಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಜಿಲ್ಲೆಯಲ್ಲಿ 88 ಪಶು ಆಸ್ಪತ್ರೆ ಹಾಗೂ ಪಶು ಚಿಕಿತ್ಸಾಲಯಗಳಿವೆ. ಇದರಲ್ಲಿ ಶೇ. 90ರಷ್ಟು ವೈದ್ಯರಿಲ್ಲ. ಶೇ. 70ಕ್ಕಿಂತ ಹೆಚ್ಚು ಪರಿವೀಕ್ಷಕರು ಹಾಗೂ ಸಿಬ್ಬಂದಿ ಕೊರತೆ ಇರುವುದರಿಂದ ಜಿಲ್ಲೆಯ ಜಾನುವಾರುಗಳಿಗೆ ಸಮರ್ಪಕ ಸೇವೆ ಒದಗಿಸಲು ಪಶುಪಾಲನೆ ಇಲಾಖೆಗೆ ಸಾಧ್ಯವಾಗುತ್ತಿಲ್ಲ.
ಜಿಲ್ಲೆಯಲ್ಲಿ 384 ಸರ್ಕಾರಿ ಮಂಜೂರಾತಿ ಹುದ್ದೆಗಳ ಪೈಕಿ ಕೇವಲ 135 ಹುದ್ದೆಗಳು ಭರ್ತಿಯಾಗಿದ್ದು 249 ಹುದ್ದೆಗಳು ಖಾಲಿ ಉಳಿದಿವೆ. ವೈದ್ಯ ಮತ್ತು ಸಿಬ್ಬಂದಿ ಕೊರತೆಯಲ್ಲಿಯೇ ಕಳೆದ ಒಂದು ದಶಕದಿಂದ ಇಲಾಖೆ ಕಾರ್ಯನಿರ್ವಹಿಸಿದೆ. ಇದರಿಂದ ಇಲಾಖೆಯ ಸೇವೆ ಎಷ್ಟು ಸಮರ್ಪಕವಾಗಿದೆ ಎಂದು ಊಹಿಸಬಹುದು.
ಕೋವಿಡ್ ಹಿನ್ನೆಲೆಯಲ್ಲಿ ಇಲಾಖೆಗೆ ಕೊಂಚ ಕೆಲಸ ಕಡಿಮೆಯಾಗಿದೆ. ಇಲ್ಲದಿದ್ದರೆ ವರ್ಷದಲ್ಲಿ ನಾಲ್ಕು ಬಾರಿ ಲಸಿಕೆ ಅಭಿಯಾನ ನಡೆಸುವುದು, ಸಭೆಗಳಿಗೆ ಹಾಜರಾಗಿ ಜನಪ್ರತಿನಿಧಿಗಳಿಗೆ ಮಾಹಿತಿ ಒದಗಿಸುವುದು, ಆಕಸ್ಮಿಕವಾಗಿ ಕುರಿ, ಮೇಕೆ, ಜಾನುವಾರು ಮೃತಪಟ್ಟರೆ ಮಹಜರ್ ನಡೆಸಿ ವರದಿ ನೀಡುವುದು ಸೇರಿದಂತೆ ವಿಮೆ ದೃಢೀಕರಣ ಕೆಲಸವನ್ನು ವೈದ್ಯರು ಮಾಡಬೇಕಾಗಿದೆ. ಹಿರಿಯ ಪಶು ವೈದ್ಯಕೀಯ ಪರೀಕ್ಷಕರು ಲಸಿಕಾ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ವೈದ್ಯರ ಕೊರತೆಯಿಂದ ಜಾನುವಾರಗಳ ಕಾಲುಬಾಯಿ ಜ್ವರ ಹಾಗೂ ಇತರ ಕಾಯಿಲೆಗಳ ನಿಯಂತ್ರಣ ಸವಾಲಿನ ಕೆಲಸವಾಗಿದೆ.
ಮಳೆಗಾಲದಲ್ಲಿ ಸಾಮಾನ್ಯವಾಗಿ ಗಂಟಲು ಬೇನೆ, ಕಾಲುಬೇನೆ ಹಾಗೂ ಕರಳು ಬೇನೆ ಸೇರಿ ವಿವಿಧ ಕಾಯಿಲೆಗೆ ಜಾನುವಾರುಗಳು ತುತ್ತಾಗುತ್ತವೆ. ಈ ಸಂದರ್ಭದಲ್ಲಿ ಜನರು ಚಿಕಿತ್ಸೆಗೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯಬೇಕಾದ ಪರಿಸ್ಥಿತಿ ತಲೆದೋರಿದೆ.
ಗದಗ - ಬೆಟಗೇರಿ ಅವಳಿ ನಗರದ 11, ಗದಗ ತಾಲೂಕಿನಲ್ಲಿ 27, ಶಿರಹಟ್ಟಿ 13, ರೋಣ 23, ಮುಂಡರಗಿ 16 ಹಾಗೂ ನರಗುಂದ ತಾಲೂಕಿನ 9 ಪಶು ಆಸ್ಪತ್ರೆಗಳು ಸೇರಿದಂತೆ 88 ಪಶು ಆಸ್ಪತ್ರೆಗಳು ಹಾಗೂ ಪಶು ಚಿಕಿತ್ಸಾಲಯಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ 1,58,395 ದನಗಳು, 60,989 ಎಮ್ಮೆಗಳು, 2,59,047 ಕುರಿಗಳು, 1,06,353 ಮೇಕೆಗಳು, 1,56,270 ಕೋಳಿಗಳು ಹಾಗೂ 216 ಕುದುರೆಗಳು ಸೇರಿದಂತೆ 6,08,727 ಪಶುಗಳಿವೆ.
ಜಿಲ್ಲೆಯ ಪಶು ಪಾಲನೆ ಇಲಾಖೆಯಲ್ಲಿ ವೈದ್ಯ ಮತ್ತು ಸಿಬ್ಬಂದಿ ಕೊರತೆ ಸಾಕಷ್ಟಿದೆ. ಈ ಕುರಿತು ಪ್ರತಿ ತಿಂಗಳು ಸರ್ಕಾರಕ್ಕೆ ಮಾಹಿತಿ ಕಳಿಸಲಾಗುತ್ತಿದೆ. ಬೇರೆ ಇಲಾಖೆಯಲ್ಲಿರುವ ನಮ್ಮ ಸಿಬ್ಬಂದಿ ಮೂಲ ಇಲಾಖೆಗೆ ಬರಬೇಕು. ಈ ಕುರಿತು ವರ್ಗಾವಣೆ ನಿಯಮವನ್ನು ಬದಲಿಸಬೇಕಿದೆ. ಈ ವಿಷಯ ಸರ್ಕಾರದ ಹಂತದಲ್ಲಿ ಚರ್ಚೆಯಲ್ಲಿದೆ.ಡಾ. ಗುರುರಾಜ ಮನಗೂಳಿಪಶುಪಾಲನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ