ವೈದ್ಯರ ಋಣ ತೀರಿಸಲಾಗದು: ನೇಗಿಲಯೋಗಿ ಟ್ರಸ್ಟ್ ಜಿಲ್ಲಾಧ್ಯಕ್ಷ ಎ.ಸಿ.ರಮೇಶ್ ಶ್ಲಾಘನೆ

Dho Office Doctor's Day)
Published on

ಮಂಡ್ಯ: ಜೀವ ಉಳಿಸುವ ವೈದ್ಯರಿಗೆ ಗೌರವ ಸಮರ್ಪಣೆ ಮಾಡುವುದು ಎಲ್ಲರ ಆದ್ಯತೆ ಎಂದು ನೇಗಿಲಯೋಗಿ ಟ್ರಸ್ಟ್ ಜಿಲ್ಲಾಧ್ಯಕ್ಷ ಎ.ಸಿ.ರಮೇಶ್ ಹೇಳಿದರು.

ನಗರದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ರೋಟರಿ ಸಂಸ್ಥೆ, ಆರೋಗ್ಯ ಇಲಾಖೆ, ಅನನ್ಯ ಹಾರ್ಟ್ ಸಂಸ್ಥೆ ಸಹಯೋಗದಲ್ಲಿ ಶನಿವಾರ ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಉತ್ತಮ ವೈದ್ಯರಿಗೆ ಬಿ.ಸಿ.ರಾಯ್ ಪ್ರಶಸ್ತಿ ಪ್ರದಾನ ಹಾಗೂ ಗಿಡ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೋಗಿಗಳ ಜೀವ ಉಳಿಸಲು ಮಾರ್ಗದರ್ಶನ, ಚಿಕಿತ್ಸೆ ಹಾಗೂ ಹೋರಾಟ ಮಾಡುವ ಋಣವನ್ನು ಫಲಾನುಭವಿಗಳು ತೀರಿಸಲಾಗದು. ಸಮಾಜ ಇಂತಹ ವೈದ್ಯರನ್ನು ಎಂದಿಗೂ ಮರೆಯಲಾರದು. ಬದುಕಿರುವ ತನಕ ಸದಾ ಸ್ಮರಿಸಿಕೊಳ್ಳುತ್ತಾರೆ ಎಂದು ನುಡಿದರು.

10 ವರ್ಷದ ಹಿಂದೆ ನನ್ನ ಆರೋಗ್ಯ ಸ್ಥಿತಿ ಕೆಟ್ಟದಾಗಿತ್ತು. ಒತ್ತಡದ ಕೆಲಸ ಕಾರ್ಯಗಳ ಉದ್ಯಮದಲ್ಲಿ ನಾನು ತೊಡಗಿಸಿಕೊಂಡಿದ್ದೆ, ವೈದ್ಯರು ಹೃದಯ ಪರೀಕ್ಷೆ ನಡೆಸಿದರು. ತಕ್ಷಣ ಚಿಕಿತ್ಸೆಗೆ ಕಾರ್ಯೋನ್ಮುಖರಾಗಿ ನನ್ನ ಜೀವ ಉಳಿಸಿ ದೇವರಾದರು. ಆ ವೈದ್ಯರ ಋಣ ನಮ್ಮ ಮೇಲಿದೆ. ಎಲ್ಲರೂ ವೈದ್ಯರಿಗೆ ಚಿರಋಣಿಯಾಗಿರಬೇಕು. ಜನರ ಜೀವ ಮತ್ತು ಆರೋಗ್ಯವನ್ನು ರಕ್ಷಿಸುವ ವೈದ್ಯರನ್ನು ಸ್ಮರಿಸುವುದು. ಅವರನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ. ವೈದ್ಯರ ಬಳಿ ಹೋಗದ ಮನುಷ್ಯನೇ ಇಲ್ಲ ಎಂದು ನುಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ, ರೋಟರಿ ಸಂಸ್ಥೆ ಅಧ್ಯಕ್ಷೆ ಬಿ.ಎಸ್.ಅನುಪಮಾ, ಮಾಜಿ ಅಧ್ಯಕ್ಷ ಎಸ್.ನಾರಾಯಣ್, ನಿವೃತ್ತ ಇಂಜಿನಿಯರ್ ದೇವರಾಜ್, ಕೌಶಲಾಧಿಕಾರಿ ವೇಣುಗೋಪಾಲ್, ಡಾ.ಮರೀಗೌಡ ಇತರರಿದ್ದರು.

ಇದೇ ಸಂದರ್ಭದಲ್ಲಿ ವೈದ್ಯರಾದ ಡಾ.ಸಂಜಯ್, ಡಾ.ಅರ್ಜುನ್, ಡಾ.ಶಿಲ್ಪಾ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಕಚೇರಿ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರೆರೆಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net