ವೈದ್ಯಕೀಯ ವೃತ್ತಿಗೆ ಕಾಲಿಟ್ಟ ಕಾರ್ಪೋರೇಟ್ ಸಂಸ್ಕೃತಿ: ಖ್ಯಾತ ಮಕ್ಕಳ ತಜ್ಞ ಡಾ.ಜಗದೀಶ್‌ಕುಮಾರ್ ಬೇಸರ

Doctors day celebration Mandya
Published on

ಮಂಡ್ಯ: ವೈದ್ಯ ವೃತ್ತಿ ಜನ ಸೇವೆಗಾಗಿ ಇದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಸೇವೆ ಮಾಡಿದಾಗ ಮಾತ್ರ ಜನಮನ್ನಣೆ ಗಳಿಸಲು ಸಾಧ್ಯ. ಆದರೆ ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ತಿಳಿದೋ ತಿಳಿಯದೋ ಕಾರ್ಪೋರೇಟ್ ಸಂಸ್ಕೃತಿ ಕಾಲಿಟ್ಟಿತ್ತು. ಅದನ್ನು ಬಳಕೆ ಮಾಡಿಕೊಂಡ ನಾವು ಅದರಿಂದ ಹೊರಬರಲಾಗದೇ ವೈದ್ಯ ಸಮುದಾಯಕ್ಕೆ ಕೆಟ್ಟ ಹೆಸರು ಬರುವಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ ಎಂದು ಖ್ಯಾತ ಮಕ್ಕಳ ತಜ್ಞ ಡಾ.ಜಗದೀಶ್‌ಕುಮಾರ್ ಹತಾಶರಾಗಿ ನುಡಿದರು.

ನಗರದ ಕಾಳೇಗೌಡ ಪ್ರೌಢಶಾಲೆ ಆವರಣದಲ್ಲಿ ಸಂತೋಷ್ ಪಿಯು ಕಾಲೇಜು ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವೈದ್ಯರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯ ಸಮುದಾಯಕ್ಕೆ ಕಾರ್ಪೋರೇಟ್ ವಲಯ ಕಾಲಿಟ್ಟಿರುವುದರಿಂದ ಬಡವರಿಗೆ ಚಿಕಿತ್ಸೆ ದುಬಾರಿಯಾಗಿದೆ. ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿ ಯೋಜನೆಗಳನ್ನು ತಂದು ಬದಲಾವಣೆ ಮಾಡುತ್ತಿದ್ದರೂ ಅದು ಸಾಲುತ್ತಿಲ್ಲ. ಜತೆಗೆ ವೈದ್ಯಕೀಯ ವೃತ್ತಿಯು ಪ್ರಸ್ತುತದಲ್ಲಿ ಕಲುಷಿತಗೊಂಡಿದೆ ಎಂದು ವಿಷಾದಿಸಿದರು.

ಕೆಲ ವೈದ್ಯರು ತಮಗಿಷ್ಟ ಇಲ್ಲದಿದ್ದರು ಕಾರ್ಪೋರೇಟ್ ಸಂಸ್ಕೃತಿಗೆ ಒಗ್ಗಿಕೊಳ್ಳುವಂತಾಗಿರುವ ಸ್ಥಿತಿ ಇರುವುದು ದುರಂತ. ಆಸ್ಪತ್ರೆಗಳಲ್ಲಿನ ಖರ್ಚು ವೆಚ್ಚಗಳ ಪ್ರಮಾಣವೂ ಹೆಚ್ಚಾಗಿರುವುದರಿಂದ ಪ್ರತಿ ಚಿಕಿತ್ಸೆಗೂ ಖರ್ಚು ಹೆಚ್ಚಾಗುತ್ತಲೇ ಇದೆ. ಸರ್ಕಾರವು ಆರೋಗ್ಯ ಕ್ಷೇತ್ರದಲ್ಲಿ ಏನೆಲ್ಲ ಯೋಜನೆಗಳನ್ನು ಮಾಡುತ್ತಿದೆ, ಆದರೆ ಅದು ಸಾಲುತ್ತಿಲ್ಲ. ಈ ಹಿಂದೆ ಕೇವಲ ಹತ್ತು ಎಕರೆ ಜಮೀನು ಹೊಂದಿದ ರೈತ ಶ್ರೀಮಂತ ಎನ್ನಬಹುದಿತ್ತು. ಆದರೆ ಇಂದು 50ಕ್ಕೂ ಹೆಚ್ಚು ಎಕೆರೆ ಜಮೀನು ಹೊಂದಿರುವ ರೈತರು ಬೇಡುವ ಸ್ಥಿತಿ ಇಂದು ಬಂದಿದೆ. ಇದಕ್ಕೆ ಕಾರಣ ಆತ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿರುವುದೇ ಆಗಿದೆ. ಇನ್ನೊಂದೆಡೆ ದಲ್ಲಾಳಿಗಳ ಹಾವಳಿಯಿಂದ ರೈತರಿಗೆ ಬೆಲೆ ಸಿಗುತ್ತಿಲ್ಲ. ಯಾವುದೇ ಬೆಳೆ ಬೆಳೆದರು ರೈತರು ಖರ್ಚು ಮಾಡಿದ ಹಣ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನಾದರೂ ರೈತರ ಕಷ್ಟ ಕೇಳುವಂತಾಗಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಪಿಯುಸಿ ಘಟ್ಟವು ವಿದ್ಯಾರ್ಥಿಗಳಿಗೆ ತಪಸ್ಸು ಇದ್ದಂತೆ. ಅದನ್ನು ಗಂಭೀರ ಹಾಗೂ ಸವಾಲಾಗಿ ಸ್ವೀಕರಿಸಿ ತಮ್ಮ ಕನಸು ನನಸು ಮಾಡಿಕೊಳ್ಳಲು ಶ್ರಮ ಪಡಬೇಕು ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಬಿ.ಸಂತೋಷ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈದ್ಯರಾದ ಡಾ.ಸಿ.ಎಸ್.ರವಿ, ಡಾ.ಕೆ.ಸಿ.ಶ್ರೀಧರ್, ಡಾ.ಆರ್.ಶಶಿಕಲಾ, ಡಾ.ಸಿ.ನಿಂಗಯ್ಯ, ಡಾ.ತನುಶ್ರೀ, ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಗುರುಸ್ವಾಮಿ ಇತರರಿದ್ದರು. ಇದೇ ವೇಳೆ 15 ಜನ ವೈದ್ಯರನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net