ಎಸ್‌ಡಿಎಂ ಆಸ್ಪತ್ರೆ ವೈದ್ಯರ ಸೇವೆ ಶ್ಲಾಘನೀಯ: ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ಹೇಳಿಕೆ

sdm
ಉಜಿರೆ ಎಸ್.ಡಿ.ಎಂ ಆಸ್ಪತ್ರೆ ವೈದ್ಯರ ದಿನಾಚರಣೆಯಲ್ಲಿ ವೈದ್ಯರನ್ನು ಗೌರವಿಸಲಾಯಿತು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದೇವೇಂದ್ರ ಕುಮಾರ್, ಮುಖ್ಯ ವೈದ್ಯಾಧಿಕಾರಿ ಡಾ.ಸಾತ್ವಿಕ್ ಜೈನ್ ಇದ್ದರು.
Published on

ಬೆಳ್ತಂಗಡಿ: ಉಜಿರೆ ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನ ಆಚರಿಸಲಾಯಿತು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ಮಾತನಾಡಿ, ವೈದ್ಯರದ್ದು ಕೇವಲ ವೃತ್ತಿಯಲ್ಲ, ಅದು ಸೇವೆ. ರೋಗಿಗಳ ಸೇವೆಗಾಗಿ ಹೆಚ್ಚಿನ ಸಮಯವನ್ನು ಮುಡಿಪಾಗಿಡುವ ವೈದ್ಯರದ್ದು ಒತ್ತಡದ ಜೀವನ. ಮನರಂಜನೆ ಇಲ್ಲದೆ ಗ್ರಾಮೀಣ ಪ್ರದೇಶದ ಆಸ್ಪತ್ರೆಯಲ್ಲಿ ವೈದ್ಯಕೀಯ ವೃತ್ತಿ ಮಾಡುವ ವೈದ್ಯರ ಸೇವೆ ನಿಜವಾಗಿಯೂ ಶ್ಲಾಘನೀಯ . ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವಿ.ಹೆಗ್ಗಡೆ ಆಶೀರ್ವಾದ, ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಸೇವಾ ಮನೋಭಾವ ಮತ್ತು ವೃತ್ತಿನಿಷ್ಠೆಯಿಂದ ದುಡಿಯುತ್ತಿರುವ ನಮ್ಮ ಆಸ್ಪತ್ರೆಯ ವೈದ್ಯಕೀಯ ತಂಡ ಅತ್ಯುತ್ತಮ ಸೇವೆ ನೀಡುತ್ತಿದ್ದು, ಸ್ವತಃ ರೋಗಿಗಳೇ ಸೇವೆಯನ್ನು ಶ್ಲಾಘಿಸುತ್ತಿದ್ದಾರೆ ಎಂದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದೇವೇಂದ್ರ ಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದ ಈ ಆಸ್ಪತ್ರೆಯಲ್ಲಿ ಸಾಮಾನ್ಯ ಜನರಿಗೆ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ನೀಡಲು ಹಗಲಿರುಳು ದುಡಿಯುತ್ತಿರುವ ಎಲ್ಲ ವೈದ್ಯರಿಗೆ ಶುಭ ಹಾರೈಸಿದರು.

ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಎಲ್ಲ ವೈದ್ಯರನ್ನು ಹಾಗೂ ಸಂದರ್ಶನ ವೈದ್ಯರನ್ನು ಸನ್ಮಾನಿಸಲಾಯಿತು. ವಿವಿಧ ಮನರಂಜನಾ ಹಾಗೂ ಫನ್ನಿ ಗೇಮ್ಸ್‌ಗಳನ್ನು ಏರ್ಪಡಿಸಲಾಯಿತು. ಮುಖ್ಯ ವೈದ್ಯಾಧಿಕಾರಿ ಡಾ.ಸಾತ್ವಿಕ್ ಜೈನ್, ಆಸ್ಪತ್ರೆಯ ವೈದ್ಯರು, ಎಲ್ಲ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಸೃಜನ್ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net