ಪಾರಂಪರಿಕ ವೈದ್ಯ ಪರಿಷತ್ನೋಂದಣಿ ಅಭಿಯಾನ ಆರಂಭ

Published on

ಹುಬ್ಬಳ್ಳಿ: ತನ್ನದೇ ಆದ ಇತಿಹಾಸ, ಮಹತ್ವವನ್ನು ಹೊಂದಿರುವ ಪಾರಂಪರಿಕ ವೈದ್ಯ ಪದ್ಧತಿಯನ್ನು ಮುನ್ನೆಲೆಗೆ ತರುವ ಸಲುವಾಗಿ ಅಖಿಲ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಹಾಗೂ ಸಂಘಗಳ ಒಕ್ಕೂಟ ರಚಿಸಲಾಗಿದೆ ಎಂದು ಇಳಕಲ್ ಶಿವಶಕ್ತಿ ಪೀಠದ ಬಸವ ಪ್ರಸಾದ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಆಧುನಿಕ ಔಷಧ ಪದ್ಧತಿಯಿಂದಾಗಿ ಪಾರಂಪರಿಕ ಔಷಧಗಳು ನಶಿಸಿ ಹೋಗುತ್ತಿವೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಎಲ್ಲರೂ ಒಗ್ಗೂಡುವ ಅವಶ್ಯಕತೆ ಇದೆ. ಇದಕ್ಕಾಗಿ ಒಕ್ಕೂಟ ಕೆಲಸ ಮಾಡಲಿದೆ. ನೋಂದಣಿ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.

ಕರ್ನಾಟಕ ಪಾರಂಪರಿಕ ಪರಿಷತ್, ಸಂಘಗಳು ಒಕ್ಕೂಟದೊಂದಿಗೆ ಕೈ ಜೋಡಿಸಿವೆ. ಉಳಿದಿರುವ ಸಂಘಗಳು ಒಗ್ಗೂಡಬೇಕಿದೆ. ಎಲ್ಲ ಪಾರಂಪರಿಕ ವೈದ್ಯರು ಒಕ್ಕೂಟ ಸೇರಿದರೆ ಸರ್ಕಾರದ ಗಮನ ಸೆಳೆಯಲು ಅನೂಕಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಶಿವಮೊಗ್ಗದ ಕರ್ನಾಟಕ ಪಾರಂಪರಿಕ ಪರಿಷತ್ ಅಧ್ಯಕ್ಷ ಎಚ್.ಡಿ. ಪೂಜಾರ ಮಾತನಾಡಿ, ಆಧುನಿಕ ವೈದ್ಯ ಪದ್ಧತಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ಕಂಡು ಬರುತ್ತದೆ. ಪ್ರಾಚಿನ ವೈದ್ಯ ಪದ್ಧತಿ ಮರೆಯಾಗುತ್ತಿದೆ. ಹಾಗಾಗಿ ನಾಟಿ ವೈದ್ಯರಿಗೆ ಸ್ವತಂತ್ರವಾಗಿ ಜನರ ಸೇವೆ ಮಾಡಲು ಅವಕಾಶ ನೀಡಬೇಕು. ಅರಣ್ಯ ಇಲಾಖೆ ನಿಲಗಿರಿ ಗಿಡ ಬೆಳೆಸಬಾರದು, ವೈದ್ಯ ಆಧಾರಿತ ಸಸಿಗಳನ್ನು ಬೆಳೆಸಬೇಕು. ನಾಟಿ ವೈದ್ಯರಿಗೆ ಮಾಸಾಶನ ನೀಡಬೇಕು ಎಂದು ಆಗ್ರಹಿಸಿದರು.

ವೈದ್ಯ ಆನಂದ ಪೆರೂರ ಮಾತನಾಡಿ, ಜಿಲ್ಲಾ ಮಟ್ಟದ ಪಾರಂಪರಿಕ ವೈದ್ಯ ಪರಿಷತ್, ಸಂಘಗಳ ನೋಂದಣಿ ಅಭಿಯಾನ ಮಾಡಲಾಗುತ್ತಿದೆ. ಫೆ. 10ರೊಳಗೆ ನೋಂದಣಿ ಮಾಡಬೇಕು ಎಂದರು.
ವೈದ್ಯ ಕುಮಾರಸ್ವಾಮಿ ಇತರರು ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net