ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಲಭ್ಯ

22spt7
Published on

ಸೋಮವಾರಪೇಟೆ: ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಹೊಸದಾಗಿ ಮೂಳೆ ತಜ್ಞರು ಹಾಗೂ ಮಕ್ಕಳ ತಜ್ಞರು ನೇಮಕವಾಗಿದ್ದು, ಮುಂದಿನ ದಿನಗಳಲ್ಲಿ ರೋಗಿಗಳಿಗೆ ಲಭ್ಯವಿರಲಿದ್ದಾರೆ ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.

ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳ್ಳಿ ನೇತೃತ್ವದಲ್ಲಿ ಸದಸ್ಯರು ಭಾನುವಾರ ಶಾಸಕರನ್ನು ಭೇಟಿಯಾಗಿ, ತಾಲೂಕಿನ ಅಭಿವೃದ್ಧಿ ವಿಷಯದಲ್ಲಿ ಚರ್ಚೆ ಮಾಡುವಾಗ ಶಾಸಕರು ಮಾತನಾಡಿ, ಆಸ್ಪತ್ರೆಗೆ ಅವಶ್ಯಕ ತಜ್ಞವೈದ್ಯರನ್ನು ನೇಮಿಸಲು ಅರೋಗ್ಯ ಸಚಿವರಿಗೆ ಮನವರಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯ ವೈದ್ಯರ ಸೇವೆ ದೊರೆಯಲಿದೆ ಎಂದು ಹೇಳಿದರು.

ಸೋಮವಾರಪೇಟೆಯಲ್ಲಿ ಒಳಾಂಗಣ ಕ್ರೀಡಾಂಗಣವಿಲ್ಲದೆ ಅನೇಕ ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಅನ್ಯಾಯವಾಗಿದೆ. ಸುಸಜ್ಜಿತ ಒಳಾಂಗಣ ಕ್ರೀಡಾಂಗಣಕ್ಕೆ ಅನುದಾನ ಕಲ್ಪಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.

ಮಾದಾಪುರವನ್ನು ಹೋಬಳಿ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕು. ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಮಲ್ಲಳ್ಳಿ ಜಲಪಾತದಲ್ಲಿ ಕೇಬಲ್ ಕಾರ್ ಕಾಮಗಾರಿಗೆ ಚಾಲನೆ ಸಿಗಬೇಕು. ಸೋಮವಾರಪೇಟೆಯಲ್ಲಿ ಹದಗೆಟ್ಟಿರುವ ಪಾಕಿರ್ಂಗ್ ವ್ಯವಸ್ಥೆಯನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.

ಕ್ಷೇತ್ರದ ಅಭಿವೃದ್ಧಿಗಾಗಿ ಎಲ್ಲ ಪ್ರಯತ್ನ ಮಾಡುತ್ತೇವೆ. ನಾನು ಬೇಡಿಕೆಯಿಟ್ಟ ಎಲ್ಲ ಕಾಮಗಾರಿಗಳಿಗೆ ಸರ್ಕಾರ ಅನುದಾನ ಕಲ್ಪಿಸುತ್ತಿದೆ. ಮಳೆ ಕಡಿಮೆಯಾದ ತಕ್ಷಣ ಎಲ್ಲ ರಸ್ತೆ ಕಾಮಗಾರಿಗಳು ವ್ಯವಸ್ಥಿತವಾಗಿ ನಡೆಯಲಿದೆ ಎಂದು ಶಾಸಕರು ಭರವಸೆ ನೀಡಿದರು.

ಮಾಗಡಿ ಜಾಲ್ಸೂರು ಹೆದ್ದಾರಿಯ ಭಾಗವಾದ ಮರಿಯಾನಗರದಿಂದ ಬಾಣವಾರದತನಕ ಸುಮಾರು 300 ಮೀಟರ್‌ನಷ್ಟು ರಸ್ತೆ ತೀವ್ರ ಹದಗೆಟ್ಟಿದ್ದು, ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿರುವ ಬಗ್ಗೆ ಮನವರಿಕೆ ಮಾಡಲಾಗಿದೆ. ಮಳೆ ಕಡಿಮೆಯಾದ ತಕ್ಷಣ ದುರಸ್ತಿ ಮಾಡಿಕೊಡುವುದಾಗಿ ಶಾಸಕರು ಭರವಸೆ ನೀಡಿದರು.

ಸೋಮವಾರಪೇಟೆ ಯೋಜನಾ ಪ್ರಾಧಿಕಾರ (ಸೂಡ) ಮತ್ತು ಮಡಿಕೇರಿ ಟೌನ್ ಪ್ಲಾನಿಂಗ್ ಅಥಾರಿಟಿ (ಮೂಡ)ಯಲ್ಲಿ ಕೆಲವು ಗ್ರಾಮ ಪಂಚಾಯಿತಿಯ ಗ್ರಾಮಗಳನ್ನು ಸೇರಿಸಿಕೊಂಡಿರುವುದರಿಂದ ಜನಸಾಮಾನ್ಯರು, ರೈತರ ಅವಶ್ಯ ಕೆಲಸಗಳು ಆಗುತ್ತಿಲ್ಲ ಎಂಬ ಸದಸ್ಯರ ದೂರಿಗೆ ಪ್ರತಿಕ್ರಿಯೆಸಿ ಅತಿ ಶೀಘ್ರವಾಗಿ ಸೂಡ ಮತ್ತು ಮೂಡ ಸಮಿತಿಯ ಸದಸ್ಯರೊಂದಿಗೆ ಚರ್ಚಿಸಿ, ಕೆಡಿಪಿ ಸಭೆಯಲ್ಲಿ ಚರ್ಚಿಸಿ ಸಮಸ್ಯೆಗೆ ಪರಿಹಾರ ನೀಡುವ ಭರವಸೆಯನ್ನು ನೀಡಿದರು.

ಸೋಮವಾರಪೇಟೆಯಲ್ಲಿ ಇಂದಿರಾ ಕ್ಯಾಂಟಿನ್ ಪ್ರಾರಂಭವಾಗಲು ಶ್ರಮಿಸಿರುವುದಕ್ಕೆ ಸಮಿತಿ ವತಿಯಿಂದ ಶಾಸಕರನ್ನು ಅಭಿನಂದಿಸಲಾಯಿತು. ಸಮಿತಿ ಸದಸ್ಯರಾದ ನಿವೃತ್ತ ತಹಸೀಲ್ದಾರ್ ಜಯರಾಮ್, ನ.ಲ.ವಿಜಯ, ಸುಲೈಮಾನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net