2 ತಿಂಗಳೊಳಗೆ ವೈದ್ಯರ ನೇಮಕ

31 CRP 01 (1)
Published on

ಚನ್ನರಾಯಪಟ್ಟಣ: ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಎರಡು ತಿಂಗಳೊಳಗೆ ವೈದ್ಯರು ಹಾಗೂ ನರ್ಸ್‌ಗಳನ್ನು ನೇಮಕ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ತಾಲೂಕಿನ ಚಿಕ್ಕೋನಹಳ್ಳಿ ಗೇಟ್ ಬಳಿಯ ಶ್ರೀಸಾಯಿಬಾಬ ಮಂದಿರಕ್ಕೆ ಮಂಗಳವಾರ ಭೇಟಿ ನೀಡಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ರಾಜಕೀಯಕ್ಕಿಂತ ರಾಜ್ಯದ ಜನತೆಯ ಆರೋಗ್ಯ ಮುಖ್ಯ. ಹಾಗಾಗಿ ನೇಮಕಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.

ಕೇಂದ್ರದಿಂದ ರಾಜ್ಯಕ್ಕೆ 8 ಮೆಡಿಕಲ್ ಕಾಲೇಜು ಮಂಜೂರಾಗಿದ್ದು ಅಗತ್ಯವಿರುವ ನಗರಗಳಲ್ಲಿ ಸ್ಥಾಪಿಸಲಾಗುವುದು ಎಂದರು.

ಜನೌಷಧ ಕೇಂದ್ರಗಳನ್ನು ಹೋಬಳಿ ಮಟ್ಟದ ಆಸ್ಪತ್ರೆಗಳಲ್ಲಿ ತೆರೆಯಲು ಚಿಂತನೆ ನಡೆಸಲಾಗಿದೆ. ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ಸಂಚಾರ ಆಸ್ಪತ್ರೆಗಳನ್ನು ತೆರೆಯಲು ಸರ್ಕಾರ ಚಿಂತನೆ ನಡೆಸಿದ್ದು, ಶೀಘ್ರ ಕಾರ್ಯ ರೂಪಕ್ಕೆ ಬರಲಿದೆ ಎಂದರು.

ಮುಂದಿನ ದಿನಗಳಲ್ಲಿ ಚನ್ನರಾಯಪಟ್ಟಣದಲ್ಲಿ ಒಂದೆರಡು ದಿನ ವಾಸ್ತವ್ಯ ಹೂಡಿ ತಾಲೂಕಿನಾದ್ಯಂತ ಸಂಚರಿಸಲಾಗುವುದು. ಆ ಮೂಲಕ ಇಲ್ಲಿ ಕಂಡುಬರುವ ಸಮಸ್ಯೆಗಳನ್ನು ಸಿಎಂ ಗಮನಕ್ಕೆ ತಂದು, ಪರಿಹರಿಸಲಾಗುವುದು ಎಂದು ಭರವಸೆ ನಿಡಿದರು.

ಇದಕ್ಕೂ ಮೊದಲು ಮಂದಿರದಲ್ಲಿ ಶ್ರೀಸಾಯಿಬಾಬ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಶ್ರೀ ಗುರುಮೂರ್ತಿ ಗುರೂಜಿ ಅವರನ್ನು ಸನ್ಮಾನಿಸಿ ಆಶೀರ್ವಾದ ಪಡೆದರು.

ನನ್ನ ಗಮನಕ್ಕೆ ಬಂದಿಲ್ಲ: ಗೋಕಾಕ್ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೋಳಿ ಅವರು ಲಕ್ಷ್ಮೀಹೆಬ್ಬಾಳ್ಕರ್ ವಿರುದ್ಧ ಮರಾಠಿ ಸಮುದಾಯದವರು ಅಭ್ಯರ್ಥಿಯಾಗುವುದಾದರೆ 5 ಕೋಟಿ ರೂ. ಕೊಡುತ್ತೇನೆ ಎಂದು ಹೇಳಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಮಾಧ್ಯಮಗಳಲ್ಲಿ ವರದಿ ಬಂದಿರುವ ಬಗ್ಗೆ ಕೇಳಿದ್ದೇನೆ. ಅದು ಹೌದಾದರೆ ಪಕ್ಷದ ಹಿರಿಯ ನಾಯಕರು ವಿಚಾರಿಸಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಜಾರಿಕೊಂಡರು.

ಪಕ್ಷದ ನಿರ್ಧಾರಕ್ಕೆ ಬದ್ಧ: ವಾಲ್ಮೀಕಿ ಅಥವಾ ಹಿಂದುಳಿದ ಸಮುದಾಯದಿಂದ ಶ್ರೀರಾಮುಲು ಮುಖ್ಯಮಂತ್ರಿಯಾಗಬೇಕು ಎಂದು ಜನತೆ ಹಾಗೂ ಅಭಿಮಾನಿಗಳು ಮಾತಾಡಿಕೊಳ್ಳುತ್ತಿದ್ದಾರೆ. ನಾನು ಈ ಬಗ್ಗೆ ಇನ್ನೂ ಯೋಚಿಸಿಲ್ಲ, ಪಕ್ಷದಲ್ಲಿ ತನ್ನದೇ ನಿಲುವು, ಸಿದ್ಧಾಂತಗಳಿವೆ. ಪಕ್ಷದಲ್ಲಿ ಹಿರಿಯರು ತುಲನೆ ಮಾಡಿ ಯಾವ ನಿರ್ಧಾರ ಕೈಗೊಳ್ಳುತ್ತಾರೋ ಅದಕ್ಕೆ ನಾನು ಬದ್ಧ. ಅಲ್ಲಿಯವರೆಗೂ ಕಾಯಲೇಬೇಕಿದೆ ಎಂದರು.

ಶ್ರೀಸಾಯಿಬಾಬ ಮಂದಿರದ ಶ್ರೀಗುರುಮೂರ್ತಿ ಗುರೂಜಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಕಿಶೋರ್, ಚನ್ನರಾಯಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿ.ಮಹೇಶ್, ಬಿಜೆಪಿ ಮುಖಂಡರಾದ ಪಟೇಲ್ ಮಂಜುನಾಥ್, ನಂಜುಂಡ ಮೈಮ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net