ವೈದ್ಯರು, ಶಿಕ್ಷಕರು ಸೇವಾ ಮನೋಭಾವದಿಂದ ಕೆಲಸ ಮಾಡಲಿ: ಶಾಸಕ ಜಿ.ಟಿ.ದೇವೇಗೌಡ

13
Published on

ಮೈಸೂರು: ಜೀವ ಉಳಿಸುವ ವೈದ್ಯರು ಮತ್ತು ಅಕ್ಷರ ಕಲಿಸುವ ಶಿಕ್ಷಕರು ಸಮಾಜದಲ್ಲಿ ತಮಗಿರುವ ಸ್ಥಾನಮಾನ ಅರಿತು ಸೇವಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು.

ಡಾ.ಚಂದ್ರಶೇಖರ್ ಫೌಂಡೇಷನ್ ಮತ್ತು ಕಾವೇರಿ ಸಮೂಹ ವಿದ್ಯಾಸಂಸ್ಥೆಗಳ ವತಿಯಿಂದ ಮೈಸೂರು ತಾಲೂಕಿನ ಇಲವಾಲ ಹೋಬಳಿ ಕರ್ಕನಹಳ್ಳಿ ಗ್ರಾಮದಿಂದ ಗುಂಗ್ರಾಲ್ ಛತ್ರದವರೆಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ 2 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಲವಾಲ ಹೋಬಳಿ ಕೇಂದ್ರಸ್ಥಾನವಾಗಿದೆ. ಮುಂದಿನ ದಿನಗಳಲ್ಲಿ ನಗರಪಾಲಿಕೆಯು ಗ್ರೇಟರ್ ಮೈಸೂರು ರಚನೆಯಾದರೆ, ಇಲವಾಲ ಮೈಸೂರಿಗೆ ಸೇರಲಿದೆ. ಈ ಭಾಗಗಳು ಸಾಕಷ್ಟು ಅಭಿವೃದ್ಧಿ ಕಾಣಬಹುದು ಎಂದರು.

ಕಾವೇರಿ ಆಸ್ಪತ್ರೆಯನ್ನು ಆರಂಭ ಮಾಡಿದ ದಿನದಿಂದಲೂ ಡಾ.ಚಂದ್ರಶೇಖರ್ ಅವರು ಆರೋಗ್ಯ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಆರೋಗ್ಯ ಕ್ಷೇತ್ರವಲ್ಲದೆ ಶಿಕ್ಷಣಕ್ಕೂ ಆದ್ಯತೆ ನೀಡಿದ್ದಾರೆ. ಮುಂದೆ ಇಲವಾಲ ಭಾಗದಲ್ಲಿ ಇಂಜಿನಿಯರಿಂಗ್ ಕಾಲೇಜು ತೆರೆಯಲು ಮುಂದಾಗಿರುವುದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ನಗರ ಪ್ರದೇಶದಲ್ಲಿ ಇಂಜಿನಿಯರಿಂಗ್ ಕಾಲೇಜುಗಳಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಇರಲಿಲ್ಲ. ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ಕೆಆರ್‌ಎಸ್ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು.

ಹವಾಮಾನ ಬದಲಾವಣೆಯಿಂದ ಸಾಕಷ್ಟು ವ್ಯತ್ಯಾಸಗಳನ್ನು ನೋಡುತ್ತಿರುವುದರಿಂದ ನಾವು ಪರಿಸರ ಕಾಪಾಡಬೇಕು. ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿದ್ದಾಗ ಇಲವಾಲದಿಂದ ಮನುಗನಹಳ್ಳಿ ಕಡೆಗೆ, ಕುಶಾಲನಗರದವರೆಗೆ ಸಸಿಗಳನ್ನು ನೆಟ್ಟಿದ್ದರಿಂದ ಇಂದು ದೊಡ್ಡದಾಗಿ ಬೆಳೆದು ನೆರಳು ನೀಡುತ್ತಿವೆ ಎಂದು ಹೇಳಿದರು.

ಸಹಕಾರ ಸಚಿವನಾಗಿದ್ದಾಗ ಸಾಲು ಮರದ ತಿಮ್ಮಕ್ಕನನ್ನು ಕರೆಸಿ ಒಂದೇ ದಿನ ಒಂದು ಲಕ್ಷ ಸಸಿ ನೆಡಲಾಗಿತ್ತು. ಶಾಲಾ, ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ಆಸ್ಪತ್ರೆಗಳು, ಉದ್ಯಾನಗಳಲ್ಲಿ ಸಸಿ ನೆಡುವಂತೆ ಮಾಡಿಸಿದ್ದೆ. ಸಾಮಾಜಿಕ ಅರಣ್ಯ ವಿಭಾಗದಿಂದ ಸಸಿಗಳನ್ನು ಬೆಳೆಸಿ ಅದನ್ನು ನೆಟ್ಟು ನಿರ್ವಹಣೆ ಮಾಡಲು ಮೂರು ವರ್ಷಕ್ಕೆ ಹಣವನ್ನು ಕೊಡಲಾಗಿತ್ತು. ನಾನು ಸರ್ಕಾರದ ಮೇಲೆ ಒತ್ತಡ ಹೇರಿದ್ದರಿಂದ ಮೂರು ವರ್ಷಗಳ ಬದಲಿಗೆ ಆರು ವರ್ಷದ ನಂತರ ಕೊಡುವಂತೆ ಮಾಡಿಸಿದ್ದೆ ಎಂದರು.

ಸಹಕಾರ ಸಂಘಗಳಿಂದಲೂ ವಿಶ್ವ ಪರಿಸರ ದಿನಾಚರಣೆ ಮಾಡುವ ಜತೆಗೆ ಸಸಿಗಳನ್ನು ನೆಡುವಂತಹ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಈಗಾಗಲೇ ಸಹಕಾರ ಸಂಘದಿಂದ ತೀರ್ಮಾನ ಮಾಡಿ ಎಲ್ಲರಿಗೂ ಹೇಳಲಾಗಿದೆ. ಶೀಘ್ರದಲ್ಲೇ ಸಹಕಾರಿಗಳು ಗಿಡ ನೆಡುವ ಕೆಲಸ ಮಾಡಲಿದ್ದಾರೆ ಎಂದರು.

ಅರಣ್ಯ ಇಲಾಖೆ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಲಕ್ಷ್ಮಣ್ ಮಾತನಾಡಿದರು. ಕಾವೇರಿ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ.ಚಂದ್ರಶೇಖರ್, ವ್ಯಪಸ್ಥಾಪಕ ನಿರ್ದೇಶಕಿ ಡಾ.ಸರಳಾ ಚಂದ್ರಶೇಖರ್, ಆಡಳಿತಾಧಿಕಾರಿ ಡಾ.ಬಿ.ಶ್ರೀಕಂಠಸ್ವಾಮಿ, ಸಂಸ್ಥೆಯ ಅಶೋಕ್, ರಾಜು ಇತರರು ಇದ್ದರು. ಪ್ರಾಂಶುಪಾಲರು, ಉಪನ್ಯಾಸಕರು, ವೈದ್ಯರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಸಿಗಳನ್ನು ನೆಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net