ಮಡಿಕೇರಿಯಲ್ಲೂ ವೈದ್ಯರ ಪ್ರತಿಭಟನೆ

Doctors also protest in Madikeri
Published on

ಮಡಿಕೇರಿ:

ಕೋಲ್ಕೋತ್ತಾದ ಆರ್‌ಜಿಆರ್ ವೈದ್ಯಕೀಯ ಆಸ್ಪತ್ರೆಯ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ, ಹತ್ಯೆ ಹಾಗೂ ಆಸ್ಪತ್ರೆ ಮೇಲೆ ದುಷ್ಕರ್ಮಿಗಳ ದಾಳಿ ಖಂಡಿಸಿ ನಡೆಯುತ್ತಿರುವ ಹೋರಾಟಕ್ಕೆ ಕೊಡಗಿನಲ್ಲೂ ವೈದ್ಯರು ಬೆಂಬಲ ಕೊಟ್ಟಿದ್ದಾರೆ. ಭಾನುವಾರ ಬೆಳಗ್ಗಿನ ತನಕ ರಾಷ್ಟ್ರವ್ಯಾಪಿ ವೈದ್ಯಕೀಯ ಸೇವೆಗಳನ್ನು ಬಂದ್ ಮಾಡುವುದಾಗಿ ಘೋಷಣೆ ಮಾಡಿರುವ ಭಾರತೀಯ ವೈದ್ಯಕೀಯ ಸಂಘದ ಕರೆಗೆ ಜಿಲ್ಲೆಯಲ್ಲೂ ಸ್ಪಂದನೆ ಸಿಕ್ಕಿದ್ದು, ವೈದ್ಯಕೀಯ ಸೇವೆಗಳಿಗೆ ಪ್ರತಿಭಟನೆಯ ಬಿಸಿ ಮುಟ್ಟಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕೊಡಗು ವೈದ್ಯಕೀಯ ವಿದ್ಯಾಲಯ ಬೋಧಕ ಆಸ್ಪತ್ರೆ ಎದುರು ವೈದ್ಯರು, ವೈದ್ಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಹತ್ಯೆಗೀಡಾದ ವೈದ್ಯೆ ಪರ ಘೋಷಣೆಗಳು ಮೊಳಗಿದವು. ಆರೋಪಿಗಳಿಗೆ ಶೀಘ್ರ ಶಿಕ್ಷೆ ವಿಧಿಸುವಂತೆ ಮತ್ತು ವೈದ್ಯರಿಗೆ ರಕ್ಷಣೆ ನೀಡುವಂತೆ ಈ ಸಂದರ್ಭ ಒತ್ತಾಯಿಸಲಾಯಿತು.

ಐಎಂಎ ಜಿಲ್ಲಾಧ್ಯಕ ಶ್ಯಾಮ್ ಅಪ್ಪಣ್ಣ, ಕಾರ್ಯದರ್ಶಿ ಡಾಕ್ಟರ್ ಪ್ರಶಾಂತ್ ಸೇರಿದಂತೆ ಹಿರಿಯ, ಕಿರಿಯ ವೈದ್ಯರು, ಆಯುಷ್ ಆಸ್ಪತ್ರೆಯ ವೈದ್ಯರು, ಹೌಸ್ ಸರ್ಜನ್, ಪಿ.ಜಿ. ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಂತರ ಆಸ್ಪತ್ರೆ ಆವರಣದಿಂದ ಜಿಲ್ಲಾಧಿಕಾರಿಗಳ ಕಚೇರಿ ತನಕ ಕಾಲ್ನಡಿಗೆಯಲ್ಲಿ ತೆರಳಿದ ಮುಷ್ಕರ ನಬಿರತರು ಜಿಲ್ಲಾಧಿಕಾರಿಗೆ ತಮ್ಮ ಮನವಿ ಸಲ್ಲಿಸಿದರು.

ವೈದ್ಯರ ಪ್ರತಿಭಟನೆ ಕಾರಣದಿಂದ ಹೊರರೋಗಿಗಳಿಗೆ ಸ್ವಲ್ಪ ಮಟ್ಟಿಗೆ ಸಮಸ್ಯೆ ಆಯಿತು. ತುರ್ತು ಚಿಕಿತ್ಸೆಯ ರೋಗಿಗಳಿಗೆ ಮುಷ್ಕರದ ಮಧ್ಯೆಯೂ ವೈದ್ಯರು ಸ್ಪಂದಿಸಿ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net