

ಮೈಸೂರು: ನಗರದ ಸ್ವಾಂತಂತ್ರ್ಯ ಹೋರಾಟಗಾರ ಎಂ.ಕೆ.ಗೋಪಾಲ ಅಯ್ಯಂಗಾರ್ ಅವರ ಪುತ್ರಿ ಕೆ.ಕೃಷ್ಣವೇಣಿ ಅವರು ಚೆನ್ನೈನಲ್ಲಿರುವ ತಮಿಳುನಾಡು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಸ್ವೀಕರಿಸಿದರು.
ಕ್ರೀಡಾ-ಮನೋವಿಜ್ಞಾನದಲ್ಲಿ ಅವರು ಸಾಧರ ಪಡಿಸಿದ ಸಂಶೋಧನೆಗೆ ಇತ್ತೀಚೆಗೆ ಚೆನ್ನೈನ ತಮಿಳುನಾಡು ಮುಕ್ತ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ 14ನೇ ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಿದರು. ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ, ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಸುಂದರ್ ಇತರ ಹಲವು ಗಣ್ಯ ಇದ್ದರು.
ಡಾ.ಕೃಷ್ಣವೇಣಿ ಅವರು ಮೈಸೂರಿನ ಅಷ್ಟಾಂಗ ಯೋಗ ವಿಜ್ಞಾನ ಮಂದಿರದ ಶ್ರೀರಂಗ ಅವರಿಂದ ಪ್ರಭಾವಿತರಾಗಿ ಈಗಿನ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಅಭ್ಯಾಸಗಳಾದ ಸಾಂಸ್ಕೃತಿಕ, ಆರೋಗ್ಯಕರ ಹಾಗೂ ವೈದಿಕ-ಸಾಂಪ್ರದಾಯಿಕ ಮೌಲ್ಯಗಳನ್ನು ಬೆಳೆಸಲು ಯೋಗ, ಕ್ರೀಡೆ, ಮಾನಸಿಕ-ದೈಹಿಕ ಶಿಕ್ಷಣದ ಮೂಲಕ ಚೆನ್ನೈ, ಬೆಂಗಳೂರು ಮತ್ತು ಮೈಸೂರಿನಲ್ಲಿರುವ ವಿದ್ಯಾರ್ಥಿಗಳಿಗೆ ಉಚಿತ ಪರಿಹಾರ, ಗೌರವ ದತ್ತಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಅಲ್ಲದೆ ತಮ್ಮ ಪ್ರಾಣಧಾರ ಯೋಗಕ್ಷೇಮ ಕೇಂದ್ರದಲ್ಲಿ ಸಾರ್ವಜನಿಕರಿಗೆ ರಿಫ್ಲೆಕ್ಸೋಲಜಿ ಚಿಕಿತ್ಸೆ, ಯೋಗ ತರಬೇತಿ, ಮಾನಸಿಕ ಸಮಾಲೋಚನೆಗಳನ್ನು ನೀಡುತ್ತಾ ಬಂದಿದ್ದಾರೆ.