

ಮಡಿಕೇರಿ: ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಲಂಚ ಪಡೆಯುತ್ತಿದ್ದ ಮಡಿಕೇರಿಯ ಕೋವಿಡ್ ಆಸ್ಪತ್ರೆ ವೈದ್ಯ ಡಾ.ಎ.ಸಿ.ಶಿವಕುಮಾರ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಬುಧವಾರ ಆದೇಶ ಹೊರಡಿಸಿದ್ದಾರೆ. ಸೋಂಕಿತರನ್ನು ಚೆನ್ನಾಗಿ ನೋಡಿಕೊಳ್ಳಲು ಸಂಬಂಧಿಕರಿಂದ ಹಣ ಪಡೆಯುತ್ತಿದ್ದ ಬಗ್ಗೆ ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ಜಂಟಿ ಕಾರ್ಯಾಚರಣೆ ನಡೆಸಿತ್ತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಸೀನಿಯರ್ ಮೆಡಿಕಲ್ ಆಫೀಸರ್ ಆಗಿರುವ ಡಾ.ಶಿವಕುಮಾರ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸೇವಾನಿರತ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಯಾಗಿದ್ದು, ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಹಣ ಕೊಟ್ಟರಷ್ಟೇ ಆರೈಕೆ, ಇಲ್ಲವಾದರೆ ಸಿಗದು ಚಿಕಿತ್ಸೆ’ ಶೀರ್ಷಿಕೆಯಡಿ ‘ವಿಜಯವಾಣಿ’ಯಲ್ಲಿ ಬುಧವಾರ ತನಿಖಾ ವರದಿ ಪ್ರಕಟವಾಗಿತ್ತು. ಅಲ್ಲದೆ, ದಿಗ್ವಿಜಯದಲ್ಲೂ ತನಿಖಾ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ವೈದ್ಯನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಡೀನ್ ಡಾ.ಕಳ್ಳಿಚಂಡ ಕಾರ್ಯಪ್ಪ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ. ಮೋಹನ್ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು.
ಎಸ್ಪಿ ಸಭೆ: ವೈದ್ಯನ ಭ್ರಷ್ಟಾಚಾರ ಸಂಬಂಧ ಕಾನೂನು ಕ್ರಮ ತೆಗೆದುಕೊಳ್ಳುವ ಕುರಿತು ಎಸ್ಪಿ ಕ್ಷಮಾ ಮಿಶ್ರಾ ಪೊಲೀಸ್ ಅಧಿಕಾರಿಗಳ ಜತೆ ರ್ಚಚಿಸಿದ್ದಾರೆ.
- ಕಾನೂನು ಕ್ರಮಕ್ಕೆ ಸಚಿವರ ಸೂಚನೆ
ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂಬಂಧ ವೈದ್ಯ ಹಣ ಪಡೆಯುತ್ತಿರುವ ಪ್ರಕರಣವನ್ನು ಆರೋಗ್ಯ ಸಚಿವ ಡಾ.ಸುಧಾಕರ್, ಕೊಡಗು ಉಸ್ತುವಾರಿ ಸಚಿವ ವಿ.ಸೋಮಣ್ಣ ಗಂಭೀರವಾಗಿ ಪರಿಗಣಿಸಿದ್ದಾರೆ. ತನಿಖಾ ವರದಿಗೆ ಸಂಬಂಧಿಸಿದಂತೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ತಪ್ಪಿತಸ್ಥ ವೈದ್ಯನ ಮೇಲೆ ಕಾನೂನು ಕ್ರಮ ಆಗಲಿದೆ ಎಂದು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದ್ದಾರೆ.
((ಕೋಟ್))
ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ತನಿಖೆ ನಡೆಸಲಾಗುವುದು. ವೈದ್ಯನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.
| ಚಾರುಲತಾ ಸೋಮಲ್ ಜಿಲ್ಲಾಧಿಕಾರಿ