

ಬೆಂಗಳೂರು: ರಸ್ತೆ ಬದಿ ಟೆಂಟ್ ಹಾಕಿಕೊಂಡು ಕರೊನಾ ಪರೀಕ್ಷೆ ನಡೆಸುತ್ತಿದ್ದ ಬಿಬಿಎಂಪಿ ವೈದ್ಯರ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ.
ಅ.22ರಂದು ಕೊಡಿಗೇಹಳ್ಳಿ ಸರ್ಕಲ್‌ನಲ್ಲಿ ಬಿಬಿಎಂಪಿ ವೈದ್ಯ ಡಾ. ವೆಂಕಟೇಶ್ ಮೇಲೆ ಹಲ್ಲೆ ನಡೆದಿದೆ. ಹಲ್ಲೆಕೋರರು ಮತ್ತು ವೈದ್ಯರ ನಡುವೆ ಸ್ಥಳದಲ್ಲಿಯೇ ರಾಜೀ ಸಂಧಾನ ನಡೆದಿದೆ. ಈ ಸಂಬಂಧ ವೈದ್ಯರು ದೂರು ನೀಡಿಲ್ಲ ಎಂದು ಕೊಡಿಗೇಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಕೊಡಿಗೇಹಳ್ಳಿ ವೃತ್ತ ಗಣೇಶ್ ದೇವಾಲಯದ ಬಳಿ ಬಿಬಿಎಂಪಿ ವತಿಯಿಂದ ಕರೊನಾ ಪರೀಕ್ಷೆ ಕ್ಯಾಂಪ್ ಹಾಕಲಾಗಿತ್ತು. ಮಾಸ್ಕ್ ಧರಿಸದೇ ದ್ವಿಚಕ್ರ ವಾಹನದಲ್ಲಿ ಇಬ್ಬರು ಅಪರಿಚಿತರು ಸ್ಥಳಕ್ಕೆ ಬಂದರು. ಅಲ್ಲಿಯೇ ಇದ್ದ ಪಾಲಿಕೆ ಆರೋಗ್ಯ ಸಿಬ್ಬಂದಿ ಸವಾರರನ್ನು ಅಡ್ಡಗಟ್ಟಿ ಮಾಸ್ಕ್ ಎಲ್ಲಿ ಎಂದು ಪ್ರಶ್ನೆ ಮಾಡಿದರು. ಕುಪಿತಗೊಂಡ ಸವಾರರು ಅವಾಚ್ಯ ಶಬ್ಧಗಳಿಂದ ಬಿಬಿಎಂಪಿ ಸಿಬ್ಬಂದಿಗೆ ನಿಂದಿಸಿದರು. ಆಗ ಸವಾರರು ಮತ್ತು ಆರೋಗ್ಯ ಸಿಬ್ಬಂದಿಗೆ ಮಾತಿನ ಚಕಮಕಿ ನಡೆಯುತ್ತಿತ್ತು.
ಗಲಾಟೆ ಬಿಡಿಸಲು ವೈದ್ಯ ಡಾ. ವೆಂಕಟೇಶ್ ಮಧ್ಯಪ್ರವೇಶಿಸಿದ್ದಾರೆ. ಸುಮ್ಮನಾಗದ ಸವಾರರು, ವೈದ್ಯರ ಮೇಲೂ ಗಲಾಟೆ ಮಾಡಿ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ ದುಷ್ಕರ್ಮಿಗಳು ವೈದ್ಯರ ವಿರುದ್ಧ ಹಲ್ಲೆ ನಡೆಸಿದ್ದಾರೆ. ಈ ಕುರಿತು ಡಾ. ವೆಂಕಟೇಶ್, ಜಾಲತಾಣದಲ್ಲಿ ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದಾರೆ.
ಸಾರ್ವಜನಿಕರ ಒಳಿತಿಗೆ ಕರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಜನ ಅರ್ಥ ಮಾಡಿಕೊಳ್ಳದೇ ವೈದ್ಯರು ಎನ್ನದೆ ಹಲ್ಲೆ ನಡೆಸಿದ್ದಾರೆ. ಕರೊನಾ ಸೋಂಕು ವಿರುದ್ಧ ಹೋರಾಟಕ್ಕೆ ಪ್ರಾಣವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿದ್ದೆವೆ. ನಮಗೆ ಆತ್ಮಸ್ಥೈರ್ಯ ತುಂಬುವ ಬದಲು ಈ ರೀತಿ ಹಲ್ಲೆ, ನಿಂದನೆ ಮಾಡಿದರೆ ನಮ್ಮ ಆಸಕ್ತಿ ಕುಗ್ಗಲಿದೆ. ನಮ್ಮ ಕರ್ತವ್ಯದಿಂದ ಹಿಂದೆ ಸರಿಯಬೇಕಾಗುತ್ತದೆ. ನಮಗೇ ರಕ್ಷಣೆ ಇಲ್ಲದಂತಾದರೇ ಸಾಮಾನ್ಯ ಜನರಿಗೆ ಬದುಕುವುದು ಹೇಗೆ ಎಂದು ನೋವು ಹಂಚಿಕೊಂಡಿದ್ದಾರೆ. ಆದರೆ, ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ದೂರು ನೀಡಿದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.