ವೈದ್ಯರ ಮೇಲೆ ಹಲ್ಲೆ ನಡೆಸಿದವರಿಗೆ ಶಿಕ್ಷೆಯಾಗಲಿ

Devadurga Doctors Protest
ದೇವದುರ್ಗದಲ್ಲಿ ಖಾಸಗಿ ವೈದ್ಯರ ಮೇಲೆ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ರ‌್ಯಾಲಿ ನಡೆಸಲಾಯಿತು.
Published on

ದೇವದುರ್ಗ: ಪಟ್ಟಣದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಂಧಲೆ ಮತ್ತು ವೈದ್ಯರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಮಿನಿವಿಧಾನಸೌಧ ಮುಂದೆ ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ಖಾಸಗಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಕೈಗೆ ಕಪ್ಪುಪಟ್ಟಿ ಧರಿಸಿ ಸೋಮವಾರ ಪ್ರತಿಭಟನೆ ನಡೆಸಿದರು.

ಜಹಿರುದ್ದೀನ್ ಪಾಷಾ ವೃತ್ತದಲ್ಲಿ ಜಮಾಯಿಸಿದ ನೌಕರರು ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದರು. ಖಾಸಗಿ ಕ್ಲಿನಿಕ್, ಆಸ್ಪತ್ರೆ, ಮೆಡಿಕಲ್ ಸ್ಟೋರ್‌ಗಳನ್ನು ಬಂದ್ ಮಾಡಿ ಸಿಬ್ಬಂದಿ ರ‌್ಯಾಲಿಯಲ್ಲಿ ಭಾಗವಹಿಸಿದ್ದರು. ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಮೃತೆಯ ಸಂಬಂಧಿಕರು ಹಾಗೂ ಗೂಂಡಾಗಳು ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಮಾರಣಾಂತಕವಾಗಿ ಹಲ್ಲೆ ನಡೆಸಿದ್ದಾರೆ. ಪೀಠೋಪಕರಣ ಪುಡಿಗಟ್ಟಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ವೈದ್ಯರ ಮೇಲೆ ಪದೇಪದೆ ಹಲ್ಲೆ ನಡೆಯುತ್ತಿವೆ. ಈ ಬಗ್ಗೆ ತೀವ್ರ ಹೋರಾಟ ನಡೆಸಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕಠಿಣಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಡಾ.ಶಿವಕುಮಾರ ಬೆನಕನ್, ಡಾ.ಗುರುನಾಥರೆಡ್ಡಿ, ಸಿ.ಎಸ್.ಪಾಟೀಲ್, ಜೆಡಿಎಸ್ ತಾಲೂಕು ಅಧ್ಯಕ್ಷ ಬುಡ್ಡನಗೌಡ, ಶೀಖರೇಶ ಪಾಟೀಲ್ ಜೋಳದಹೆಡಗಿ, ಡಾ.ಬಸವರೆಡ್ಡಿ, ಡಾ.ವಿಜಯರೆಡ್ಡಿ, ಡಾ.ಮಂಜುನಾಥ, ಡಾ.ಮಹೇಂದ್ರ, ಇತರರಿದ್ದರು.

ರೋಗಿಗಳಿಗೆ ತೊಂದರೆ

ತಾಲೂಕಿನ 20ಕ್ಕೂ ಹೆಚ್ಚು ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇದರಿಂದಾಗಿ ರೋಗಿಗಳು ಪರದಾಡಿದರು. ಬಹುತೇಕ ರೋಗಿಗಳು ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net