ಸೋಂಕಿತರಲ್ಲಿ ಬದುಕುವ ಅತ್ಮವಿಶ್ವಾಸ ತುಂಬಿರುವ ಕೋಲಾರ ಜಿಲ್ಲಾಸ್ಪತ್ರೆ

30-klr-12
Published on

ಪಾ.ಶ್ರೀ.ಅನಂತರಾಮ್ ಕೋಲಾರ

ಸರ್ಕಾರಿ ಆಸ್ಪತ್ರೆಗಳ ಬಗ್ಗೆ ನಂಬಿಕೆ, ವಿಶ್ವಾಸ ಕಳೆದುಕೊಂಡಿದ್ದ ಜನರು ಕರೊನಾ ಮಹಾಮಾರಿ ನಿಯಂತ್ರಿಸಲು ಸರ್ಕಾರಿ ವೈದ್ಯರು, ದಾದಿಯರು ಹಾಗೂ ತಾಂತ್ರಿಕ ಸಿಬ್ಬಂದಿಯ ಕಾಳಜಿ ಮತ್ತು ಹೋರಾಟಕ್ಕೆ ಸಲಾಂ ಹೇಳಲಾರಂಭಿಸಿದ್ದಾರೆ.

ನಗರದ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆ ಮೈಸೂರು ರಾಜ ವಂಶಸ್ಥರಲ್ಲಿ ಒಬ್ಬರಾದ ನರಸಿಂಹರಾಜ ಒಡೆಯರ್ ಸಹಕಾರದಿಂದ ತಲೆ ಎತ್ತಿರುವ ಬಡವರ ಪಾಲಿನ ದವಾಖಾನೆ, ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯವರೇ ಆದ ಕೆ.ಆರ್.ರಮೇಶ್ ಕುಮಾರ್ ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ರೋಗಿಗಳ ಚಿಕಿತ್ಸೆಗೆ ಬೇಕಾದ ಅಗತ್ಯ ಯಂತ್ರೋಪಕರಣ, ತಜ್ಞ ವೈದ್ಯರ ನಿಯೋಜನೆ ಸೇರಿ ಅನೇಕ ಕ್ರಮಗಳಿಂದ ಸುಧಾರಣೆ ಕಂಡಿದೆ.

ಕರೊನಾಗೆ ಚಿಕಿತ್ಸೆ ನೀಡುವ ನೆಪದಲ್ಲಿ ಹಣ ಬಾಚಿಕೊಳ್ಳಲು ಕೆಲವು ಖಾಸಗಿ ಆಸ್ಪತ್ರೆಗಳು ಪ್ರಯತ್ನ ನಡೆಸಿದ್ದವು. ಆದರೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಸರ್ಕಾರಿ ಆಸ್ಪತ್ರೆಯಲ್ಲೇ ಸೋಂಕಿತರನ್ನು ಗುಣಪಡಿಸಬೇಕೆಂದು ಕೋವಿಡ್ 19 ವಾರ್ಡಿಗೆ ಬೇಕಾದ ಸವಲತ್ತುಗಳ ಜತೆಗೆ ಕರೊನಾ ಲ್ಯಾಬ್ ಸ್ಥಾಪನೆಗೆ ಕೈಗೊಂಡ ಕ್ರಮದಿಂದ ಅನೇಕ ಸೋಂಕಿತರು ಗುಣವಾಗಿ ಸುರಕ್ಷಿತವಾಗಿ ಮನೆ ಸೇರುವಂತಾಗಿದೆ.

ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಡಳಿತದ ಸಹಕಾರ ಒಂದೆಡೆಯಾದರೆ, ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯಲ್ಲಿದ್ದ ಭಯ, ಸಂಶಯ ಹೋಗಲಾಡಿಸಿ ಸರ್ಕಾರಿ ಆಸ್ಪತ್ರೆಗಳಲ್ಲೂ ಉತ್ತಮ ವೈದ್ಯರಿರುತ್ತಾರೆಂಬುದನ್ನು ಸಾಬೀತು ಮಾಡುವಲ್ಲಿ ಜಿಲ್ಲಾ ಸರ್ಜನ್ ಡಾ.ಎಸ್.ಜಿ.ನಾರಾಯಣಸ್ವಾಮಿ, ಡಿಎಚ್‌ಒ ಡಾ.ವಿಜಯಕುಮಾರ್, ಸರ್ವೇಕ್ಷಣಾಧಿಕಾರಿ ಡಾ.ಚಾರಣಿ ಹಾಗೂ ಪ್ರತಿ ವೈದ್ಯರು ಟೀಂ ವರ್ಕ್ ಮಾಡುತಿದ್ದಾರೆ.

ಜಿಲ್ಲಾಸ್ಪತ್ರೆಗೆ ಕಳೆದ ಒಂದೂವರೆ ತಿಂಗಳಲ್ಲಿ 90ಕ್ಕೂ ಹೆಚ್ಚು ಸೋಂಕಿತರು ದಾಖಲಾಗಿದ್ದಾರೆ, ಈ ಪೈಕಿ ಈಗಾಗಲೆ 60ಕ್ಕೂ ಹೆಚ್ಚು ಜನ ಗುಣಮುಖರಾಗಿ ಮನೆ ಸೇರಿದ್ದಾರೆ. ಫಿಜಿಶಿಯನ್‌ಗಳಾದ ಡಾ.ರವಿಕುಮಾರ್, ಡಾ.ರಾಧಿಕಾ ಇನ್ನಿತರರು ಸೋಂಕಿರ ಆತ್ಮವಿಶ್ವಾಸ ಹೆಚ್ಚಿಸಿ, ಔಷಧದ ಜತೆಗೆ ಮಾನಸಿಕ ಸ್ಥೈರ್ಯ ತುಂಬಿ ಮನೆ ಸೇರುವಂತೆ ಮಾಡಿದ್ದಾರೆ.

ಆಸ್ಪತ್ರೆಯ ಸರ್ಜನ್ ಡಾ.ಎಸ್.ಜಿ.ನಾರಾಯಣಸ್ವಾಮಿ ಆಡಳಿತ ಒತ್ತಡ ನಡುವೆಯು ಶಂಕಿತರ ಗಂಟಲು ದ್ರವವನ್ನು ಪ್ರಾಯೋಗಾಲಕ್ಕೆ ತರಿಸಿಕೊಂಡು ತ್ವರಿತಗತಿಯಲ್ಲಿ ಪರೀಕ್ಷೆ ಮಾಡಿಸಿ ವರದಿ ನೀಡುವಲ್ಲಿ ಸಫಲರಾಗಿದ್ದಾರೆ.

ಮಂಗಳವಾರ ತಮಗೆ ಗುರಿ ನೀಡಿದ್ದ 384 ಪ್ರಕರಣಗಳ ಪರೀಕ್ಷೆ ಮಾಡಿಸಿ ದಾಖಲೆ ಮುರಿದಿದ್ದಾರೆ. ಇದಕ್ಕೆಲ್ಲ ಆಸ್ಪತ್ರೆ ಸಹೋದ್ಯೋಗಿಗಳು ಹಾಗೂ ಸಿಬ್ಬಂದಿ ಸಹಕಾರ ಕಾರಣವೆಂದು ಖುಷಿಯಿಂದ ಹೇಳಿಕೊಂಡಿದ್ದಾರೆ.

ಕರೊನಾ ಸೋಂಕಿನಿಂದ ಮುಕ್ತಿ ಪಡೆದಿರುವ ಜನರಿಂದ ಪ್ರಶಂಸೆ ಗಿಟ್ಟಿಸಿಕೊಂಡಿರುವ ಜಿಲ್ಲಾ ಸರ್ಕಾರಿ ಆಸ್ಪತೆ ಆಡಳಿತ ಮಂಡಳಿ ಮುಂದಿನ ದಿನಗಳಲ್ಲಿ ಎಲ್ಲ ಕಾಯಿಲೆಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಜಿಲ್ಲೆಯ ಕೀರ್ತಿ ಬೆಳಗಲಿ ಎಂಬುದು ಜನರ ಆಶಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net