

ಜಮಖಂಡಿ: ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಮನೆ, ವಸತಿ ನಿಲಯ ಹಾಗೂ ಶಾಲೆಗೆ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಭೇಟಿ ನೀಡಿ ಪರಿಶೀಲಿಸಿ, ವಸತಿ ನಿಲಯದ ಮೇಲ್ವಿಚಾರಕರಿಗೆ ಹಾಗೂ ಶಾಲೆ ಸಿಬ್ಬಂದಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.
ನಗರದ ಮೈಗೂರ ರಸ್ತೆಯ ಗುಬ್ಬಾರಾಯ ಬಡಾವಣೆಯ ನೆಲಮಹಡಿಯಲ್ಲಿರುವ ಸರ್ವೋದಯ ಕಿವುಡ ಮತ್ತು ಮೂಕ ಮಕ್ಕಳ ವಸತಿ ನಿಲಯ, ಸರ್ವೋದಯ ಶಾಲೆ ಹಾಗೂ ಹಳೇ ಕೆಎಲ್‌ಇ ಆಸ್ಪತ್ರೆ ಕೆಳಗಿನ ಬಾಲಕಿಯರ ವಸತಿ ನಿಲಯ ಮತ್ತು ನೂತನ ವಿದ್ಯಾಲಯ ಬಳಿ ನೀರು ನುಗ್ಗಿರುವ ಮನೆಗಳಿಗೆ, ತಾಲೂಕು ಕ್ರೀಡಾಂಗಣಕ್ಕೆ ತೆರಳಿ ವೀಕ್ಷಿಸಿದರು.
ನೀರು ನುಗ್ಗಿರುವ ಎರಡು ವಸತಿ ನಿಲಯಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಈ ಕಟ್ಟಡದಲ್ಲಿ ಸಮರ್ಪಕ ಗಾಳಿ ಬೆಳಕು ಬರುವುದಿಲ್ಲ. ಬಾಲಕಿಯರಿಗೆ ಸ್ನಾನಕ್ಕೆ ಬಿಸಿ ನೀರಿಲ್ಲ. ಶೌಚಗೃಹ ವ್ಯವಸ್ಥೆ, ರಾತ್ರಿ ವಾರ್ಡನ್ ಇಲ್ಲದ್ದನ್ನು ತಿಳಿದುಕೊಂಡು, ಬಳಿಕ ಸಿಡಿಪಿಒ ಎಸ್.ಸಿ. ಮ್ಯಾಗೇರಿ, ಬಾಲಕಿಯರ ವಸತಿ ನಿಲಯದ ಅಧ್ಯಕ್ಷ ಜೋತಿಬಾ ಘಾಟಗೆ ಅವರನ್ನು ತರಾಟೆಗೆ ತೆಗೆದುಕೊಂಡು, ವಿದ್ಯಾರ್ಥಿನಿಯರಿಗೆ ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರರು? ನಿಮ್ಮ ಮಕ್ಕಳನ್ನು ಈ ರೀತಿ ನೋಡಿಕೊಳ್ಳುತ್ತಿರಾ? ಎಂದು ಪ್ರಶ್ನಿಸಿದರಲ್ಲದೆ, ಸರ್ಕಾರದ ಅನುದಾನ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿ, ಇಂದು ಸಂಜೆಯೊಳಗಾಗಿ ವಸತಿ ನಿಲಯ ಬೇರೆಡೆ ಸ್ಥಳಾಂತರಿಸಲು ಸೂಚಿಸಿದರು.
ಬಳಿಕ ಸರ್ವೋದಯ ಕಿವುಡ ಮತ್ತು ಮೂಕ ಹಾಸ್ಟೆಲ್‌ಗೆ ಭೇಟಿ ನೀಡಿ, ನೆಲ ಮಹಡಿಯಲ್ಲಿ ಉಸಿರುಗಟ್ಟುವ ವಾತಾವರಣವಿದೆೆ. ಇಲ್ಲಿ ಹೇಗೆ ಮಕ್ಕಳನ್ನು ಇರಿಸಿದ್ದೀರಿ? ಒಂದೇ ಕಟ್ಟಡದಲ್ಲಿ ಮಾತುಬಾರದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರನ್ನು ಇರಿಸಿದ್ದೀರಿ, ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರರೆಂದು ಶಾಲೆಯ ಶಿಕ್ಷಕರ ಮೇಲೆ ಕೋಪಗೊಂಡರು.
ವಿದ್ಯಾರ್ಥಿಗಳನ್ನು ತಾತ್ಕಾಲಿಕವಾಗಿ ಪಂಚಮಸಾಲಿ ಸಮುದಾಯ ಭವನಕ್ಕೆ ಸ್ಥಳಾಂತರಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.
ಸರ್ವೋದಯ ಶಾಲೆಗೆ ಭೇಟಿ ನೀಡಿ ಕಿವುಡ ಮತ್ತು ಮೂಕ ಮಕ್ಕಳೊಂದಿಗೆ ಸಾಮಾನ್ಯ ಇರುವ 7ನೇ ತರಗತಿಯವರೆಗಿನ ಶಾಲೆಯಲ್ಲಿ ಮಕ್ಕಳಿಗೆ ಪಾಠ ಬೋಧನೆ ಮಾಡಲು ಸರಿಯಾದ ಕೊಠಡಿಗಳ ವ್ಯವಸ್ಥೆ ಇಲ್ಲ, ಮೂಲ ಸೌಲಭ್ಯಗಳಿಲ್ಲದ್ದರಿಂದಾಗಿ ಮಕ್ಕಳಿಗೆ ಎಷ್ಟು ತೊಂದರೆಯಾಗುತ್ತದೆ ಎಂಬುದನ್ನು ತಾವು ಅರಿತುಕೊಳ್ಳಬೇಕು ಎಂದರಲ್ಲದೆ, ಕೂಡಲೇ ಬಿಇಒ ಹಾಗೂ ಅಂಗವಿಕಲ ಇಲಾಖೆಯಿಂದ ಈ ಶಾಲೆ ಬಗ್ಗೆ ಮಾಹಿತಿ ಪಡೆದು ಕ್ರಮ ಜರುಗಿಸಬೇಕೆಂದು ಉಪ ವಿಭಾಗಾಧಿಕಾರಿಗೆ ಸೂಚಿಸಿದರು.
ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮಾತನಾಡಿ, ನೆಲಮಹಡಿಯಲ್ಲಿ ಹಾಸ್ಟೆಲ್ ನಡೆಸಲು ಅನುಮತಿ ಇಲ್ಲ. ನಗರಸಭೆ ಅನುಮತಿ ಪಡೆಯದೆ ಅನಧಿಕೃತವಾಗಿ ನಡೆಸಲಾಗುತ್ತಿದೆ. ಕಟ್ಟಡ ಮಾಲೀಕರು ಹಾಗೂ ಹಾಸ್ಟೆಲ್ ನಡೆಸುವ ಎನ್‌ಜಿಒನವರಿಗೆ ನೋಟಿಸ್ ಜಾರಿಗೊಳಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ನೂತನ ವಿದ್ಯಾಲಯ ಬಳಿಯ ಮನೆಗಳಿಗೆ ನೀರು ನುಗ್ಗಿರುವುದನ್ನು ಪರಿಶೀಲಿಸಿ, ಬೈಪಾಸ್ ರಸ್ತೆ ಮಾಡಿರುವ ಲೋಕೋಪಯೋಗಿ ಇಲಾಖೆ ಹಾಗೂ ನಗರಸಭೆ ಜಂಟಿಯಾಗಿ ಸಭೆ ಮಾಡಿ ಶಾಶ್ವತ ಪರಿಹಾರ ಮಾಡಲು ಸೂಚಿಸಿದರು. ಇದು ಜನವಸತಿ ಪ್ರದೇಶವಾಗಿರುವುದರಿಂದ ಪಕ್ಕದ ಲಕ್ಕನಕೆರೆಯಲ್ಲಿ ಎರಡು ಮೊಸಳೆಗಳಿದ್ದು, ಅವುಗಳನ್ನು ಹಿಡಿಯಲು ಅರಣ್ಯ ಇಲಾಖೆಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದಾಗ, ಡಿಸಿ ಕೂಡಲೇ ಬಲೆ ಹಾಕಿ ಹಿಡಿಯಲು ಸಂಬಂಧಿಸಿದವರಿಗೆ ಸೂಚಿಸಿದರು.
ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ತಹಸೀಲ್ದಾರ್ ಸದಾಶಿವ ಮಕ್ಕೋಜಿ, ಪಿಡಬ್ಲೂಡಿ ಎಇಇ ಎಸ್.ಆರ್. ಬಂಡಿವಡ್ಡರ, ದಾನೇಶ ಘಾಟಗೆ, ಕುಸುಮಾ ಸಪ್ಪಡ್ಲ, ಮಂಜು ದೊಡಮನಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.