

ಮೈಸೂರು: ಕಾಂಗ್ರೆಸ್ ‘ತುಕುಡೆ ತುಕುಡೆ ಗ್ಯಾಂಗ್’ನ ಸುಲ್ತಾನ್ ಆಗಿ ದೇಶದ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಎನ್‌ಡಿಎ ಮೈತ್ರಿಕೂಟ ಹಮ್ಮಿಕೊಂಡಿದ್ದ ಮೈಸೂರು-ಕೊಡಗು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಲೋಕಸಭಾ ಕ್ಷೇತ್ರಗಳ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,
. ಪ್ರಸ್ತುತ ವಿಶ್ವದಲ್ಲಿ ಭಾರತದ ಹೆಸರು ಪ್ರಜ್ವಲಿಸುತ್ತಿದೆ. ಆದರೆ, ಕಾಂಗ್ರೆಸ್ ನಾಯಕರು ವಿದೇಶಕ್ಕೆ ತೆರಳಿ ದೇಶವನ್ನು ಹೀಗಳಿಯುತ್ತಿದ್ದಾರೆ. ದೇಶದ ವಿರುದ್ಧವಾಗಿ ಯಾರು ಇದ್ದಾರೆ ಎಂಬುದು ಜನತೆಗೆ ತಿಳಿದಿದೆ. ಕಾಂಗ್ರೆಸ್‌ನ ಸಭೆ, ಸಮಾರಂಭಗಳಲ್ಲಿ ಭಾರತ ಮಾತೆಯ ಪರವಾಗಿ ಘೋಷಣೆ ಕೂಗಲೂ ಸಹ ಅನುಮತಿಯ ಅವಶ್ಯಕತೆ ಇದೆ. ಭಾರತ ಮಾತೆಯ ಪರವಾಗಿ ಘೋಷಣೆ ಕೂಗಲು ನಮಗೆ ಯಾರದ್ದಾದರು ಅನುಮತಿಯ ಅವಶ್ಯಕತೆ ಇದೆಯಾ? ದೇಶದ ಜನರು ಇವರನ್ನು ಕ್ಷಮಿಸಬೇಕಾ? ಮೊದಲು ಇವರು ವಂದೇ ಮಾತರಂ ಗೀತೆಯನ್ನು ವಿರೋಧಿಸಿದರು. ಇದೀಗ ಭಾರತ ಮಾತೆಯನ್ನು ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್‌ನ ಪ್ರಸ್ತುತ ಪಥನದ ಉತ್ತುಂಗದಲ್ಲಿ ಇದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ಗೆ ಕರ್ನಾಟಕವು ಏಕೈಕ ಲೂಟಿಯ ರಾಜ್ಯವಾಗಿದ್ದು, ಕಾಂಗ್ರೆಸ್‌ನ ಲೂಟಿಯಿಂದ ರಾಜ್ಯದ ಖಜಾನೆ ಖಾಲಿಯಾಗಿದೆ. ಹೀಗಾಗಿ ಬಡವರು ಹಾಗೂ ರಾಜ್ಯದ ಅಭಿವೃದ್ಧಿಗೆ ಹಣ ಇಲ್ಲದಂತಾಗಿದೆ. ಲೂಟಿಯಿಂದ ಹಣದ ಕೊರತೆ ಎದುರಾಗಿ ವಿದ್ಯಾರ್ಥಿ ವೇತನ ಸ್ಥಗಿತಗೊಳಿಸಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯ ಸರ್ಕಾರ ರೈತರಿಗೆ ನೀಡುತ್ತಿದ್ದ 4,000 ರೂ. ಸ್ಥಗಿತಗೊಳಿಸಿದೆ. ಐಟಿ ಹಬ್ ಬೆಂಗಳೂರು ನೀರಿನ ಸಮಸ್ಯೆಯಿಂದ ಬಳಲುವಂತೆ ಮಾಡಿದೆ. ರಾಜ್ಯ ಸರ್ಕಾರ ರಾಜ್ಯದಿಂದ ನೂರಾರು ಕೋಟಿ ಲೂಟಿ ಮಾಡಿ ದೇಶಕ್ಕೆ ಕಪ್ಪು ಹಣವನ್ನು ಹಂಚಿಕೆ ಮಾಡಿದ್ದು, ಇದು ಕಾಂಗ್ರೆಸ್‌ನ ಮಾಡೆಲ್ ಆಗಿದೆ ಎಂದು ಮೋದಿ ಟೀಕಿಸಿದರು.