ದಾವಣಗೆರೆಯಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ, ಯಾವಾಗ ಗೊತ್ತಾ?

EDDELU KARNATAKA PRESS MEET
ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಎದ್ದೇಳು ಕರ್ನಾಟಕ ಸಂಘಟನೆಯ ಕೇಂದ್ರ ಸಲಹಾ ಸಮಿತಿಯ ಸದಸ್ಯೆ ಮಲ್ಲಿಗೆ ಸಿರಿಮನಿ ಸುದ್ದಿಗೋಷ್ಠಿ ನಡೆಸಿದರು.
Published on

ವಿಜಯಪುರ: ಸ್ವಾತಂತ್ರೃ, ಸಮಾನತೆ, ಸಹೋದರತೆ ಮುಂತಾದ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದರ ಜೊತೆಗೆ ಸರ್ವರಿಗೂ ನ್ಯಾಯ, ಸಮಾನ ಅವಕಾಶಗಳನ್ನು ನೀಡಿದ ಭಾರತೀಯ ಸಂವಿಧಾನದ ಘನತೆ ಎತ್ತಿ ಹಿಡಿಯುವ ಉದ್ದೇಶದೊಂದಿಗೆ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಏ. 26 ರಂದು ದಾವಣಗೆರೆಯಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಎದ್ದೇಳು ಕರ್ನಾಟಕ ಸಂಘಟನೆಯ ಕೇಂದ್ರ ಸಲಹಾ ಸಮಿತಿಯ ಸದಸ್ಯೆ ಮಲ್ಲಿಗೆ ಸಿರಿಮನಿ ಹೇಳಿದರು.

ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆಯುತ್ತಿರುವ ಕಾರಣದಿಂದಲೇ ಇಂದು ದೇಶದಲ್ಲಿ ಶಾಂತಿ ಸಹಬಾಳ್ವೆಯಿಂದ ಬದುಕಲು ಸಾಧ್ಯವಾಗಿದೆ. ಸಂವಿಧಾನದ ಆಶಯ ಬಲಗೊಳಿಸುವಲ್ಲಿ ಮುಂದಿನ ತಲೆಮಾರುಗಳ ಪಾತ್ರವೇನು? ಎಂಬುದನ್ನು ತಿಳಿಸಿಕೊಡುವುದೇ ಈ ಸಮಾವೇಶದ ಉದ್ದೇಶ. ಒಕ್ಕೂಟ ವ್ಯವಸ್ಥೆಯಲ್ಲಿ ಶಾಂತಿ ಸಹಬಾಳ್ವೆಯಿಂದ ಬದುಕಲು ಸಂವಿಧಾನದಿಂದ ಮಾತ್ರ ಸಾಧ್ಯ. ಹೀಗಾಗಿ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ಸಮಾವೇಶ ಆಯೋಜಿಸಿರುವುದಾಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳುವರು. ಜಿಗ್ನೇಶ ಮೇವಾನಿ, ಪರಕಾಲ ಪ್ರಭಾಕರ, ಮೇಧಾ ಪಾಟ್ಕರ್, ನಟ ಪ್ರಕಾಶ ರೈ, ಪ್ರೊ.ಬರಗೂರ ರಾಮಚಂದ್ರ ಪ್ಪ, ಪುರುಷೋತ್ತಮ ಬಿಳಿಮಲೆ ಮತ್ತಿತರರು ಪಾಲ್ಗೊಳ್ಳುವರು. ಸುಮಾರು 25 ಸಾವಿರಕ್ಕೂ ಅಧಿಕ ಜನ ಪಾಲ್ಗೊಳ್ಳುವರೆಂದು ತಿಳಿಸಿದರು.

ಫಾದರ್ ಟಿಯೋಲ್ ಮಚ್ಯಾಡು ಮಾತನಾಡಿ, ಸಂವಿಧಾನ ಪೀಠೀಕೆ ಆರಂಭಗೊಳ್ಳುವುದೇ ‘ಭಾರತದ ಪ್ರಜೆಗಳಾದ ನಾವು’ ಎಂಬ ವಾಕ್ಯದಿಂದ. ಭಾರತದ ಹಿಂದುಗಳಾದ, ಮುಸ್ಲಿಂರಾದ, ಕ್ರಿಶ್ಚಿಯನ್‌ರಾದ ಎಂಬ ಪದದಿಂದ ನಮ್ಮ ಪೀಠಿಕೆ ಆರಂಭವಾಗಲ್ಲ. ಹೀಗಾಗಿ ಸಂವಿಧಾನ ಸರ್ವರಿಗೂ ಸಮಾನತೆಯನ್ನು ತಂದುಕೊಟ್ಟಿದೆ. ಈ ಕಾರಣಕ್ಕಾಗಿ ಸಂವಿಧಾನ ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸ ಆಗಬೇಕಾಗಿದೆ ಎಂದರು.

ಭವಿಷ್ಯದ ಕನಸು, ದೇಶದ ಪ್ರಗತಿ ಸಾಧಿಸಲು, ದುಷ್ಟ ಶಕ್ತಿಗೆ ಕಡಿವಾಣ ಹಾಕಲು, ಆಳುವ ವರ್ಗವನ್ನು ಪ್ರಶ್ನಿಸಲು, ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಲು ಇಂತ ಸಮಾವೇಶಗಳ ಅವಶ್ಯಕತೆ ಇದೆ. ಈಗಾಗಲೇ ವಾಡಿಯಿಂದ ಬೈಕ್ ಜಾಥಾ ಆರಂಭಗೊಂಡಿದ್ದು ದಾವಣಗೆರೆವರೆಗೆ ಸಾಗುತ್ತಿದೆ. ಅಂದು ಸಾವಿರ ಸಾವಿರ ಸಂಖ್ಯೆಯಲ್ಲಿ ಜನ ಸೇರಲಿದ್ದಾರೆ ಎಂದರು.

ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ ಪೂಜಾರಿ ಮಾತನಾಡಿ, ಜಿಲ್ಲೆಯಿಂದ ಹತ್ತು ಸಾವಿರಕ್ಕೂ ಅಧಿಕ ಜನ ಭಾಗವಹಿಸುತ್ತಿದ್ದು ಒಟ್ಟಾರೆ ಇಪ್ಪತ್ತೈದು ಸಾವಿರಕ್ಕೂ ಅಧಿಕ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಜಮಾತೆ ಇಸ್ಲಾಮಿಕ್ ಹಿಂದ್ ಅಧ್ಯಕ್ಷ ಮಹಿಬೂಬಲಿ ಬಳಗಾನೂರ ಮಾತನಾಡಿ, ದೇಶದ ವೈವಿಧ್ಯತೆ ಕಾಪಾಡಿ ಏಕತೆ ಸಾಧಿಸುವ ನಿಟ್ಟಿನಲ್ಲಿ ಸಂವಿಧಾನ ರೂಪಿಸಲಾಗಿದೆ. ಇದೀಗ ಆ ಸಂವಿಧಾನಕ್ಕೆ ಪೆಟ್ಟು ಬೀಳುತ್ತಿದೆ ಎಂಬಂತೆ ಭಾಸವಾಗುತ್ತಿದೆ. ಇಂಥ ಸಂದರ್ಭದಲ್ಲಿ ಸಂವಿಧಾನ ರಕ್ಷಣೆ ಮಾಡುವ ಅವಶ್ಯಕತೆ ಇದ್ದು ಈ ನಿಟ್ಟಿನಲ್ಲಿ ಸಮಾವೇಶ ಅಗತ್ಯ. ಬಹುತ್ವ ಭಾರತ ಉಳಿಯಲು ಸಂವಿಧಾನದ ಮೌಲ್ಯ ಎತ್ತಿ ಹಿಡಿಯುವ, ರಕ್ಷಿಸುವ ಕೆಲಸವಾಗಬೇಕಿದೆ ಎಂದರು.

ಮುಖಂಡರಾದ ಅಕ್ರಂ ಮಾಶ್ಯಾಳಕರ, ಜಿಲ್ಲಾ ಸಂಯೋಜಕ ಎಂ.ಎ. ಖದೀರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net