

ವಿಜಯಪುರ: ಬಿಗ್‌ಬಾಸ್ ರಿಯಾಲಿಟಿ ಶೋನ ಸ್ಪರ್ಧಿ ವರ್ತೂರ ಸಂತೋಷ ಹುಲಿ ಉಗುರು ಧರಿಸಿದ ಆರೋಪದಡಿ ಬಂಧನಗೊಳ್ಳುತ್ತಿದ್ದಂತೆ ರಾಜ್ಯದೆಲ್ಲೆಡೆ ಈಗ ಹುಲಿ ಉಗುರಿನದ್ದೇ ಚರ್ಚೆ !
ಹೌದು, ವರ್ತೂರ ಸಂತೋಷನನ್ನು ಪೊಲೀಸ್‌ರು ಬಂಧಿಸುತ್ತಿದ್ದಂತೆ ಅಂಥದ್ದೇ ಪ್ರಕರಣದಡಿ ಇನ್ನುಳಿದ ನಾಯಕರನ್ನು ಬಂಧಿಸಿ ವಿಚಾರಣೆ ನಡೆಸುತ್ತಿಲ್ಲವೇಕೆ? ಎಂಬ ಪ್ರಶ್ನೆ ಎದುರಾಗಿದೆ. ಇದೀಗ ಈ ಚರ್ಚೆ ಗುಮ್ಮಟ ನಗರಿವರೆಗೂ ತೂರಿ ಬಂದಿದ್ದು, ಬಿಜೆಪಿಯ ಮುಖಂಡ, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲರನ್ನೂ ಮುತ್ತಿಕ್ಕಿದೆ.
ವಿಜುಗೌಡರ ಪುತ್ರ ಶಾಶ್ವತಗೌಡ ಕೊರಳಲ್ಲಿ ಹುಲಿ ಉಗುರು ಹೋಲುವ ಚಿನ್ನದ ಲಾಕೆಟ್ ರಾರಾಜಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್ ಆಗುತ್ತಿದೆ.
ಶಾಶ್ವತಗೌಡರ ಕೊರಳಲ್ಲಿ ಎರಡು ಹುಲಿ ಉಗುರು ಹೋಲುವ ಒಂದು ಚಿನ್ನದ ಲಾಕೆಟ್ ಇದ್ದು ಇದು ಅಸಲಿಯಾ? ನಕಲಿಯಾ? ಎಂಬ ಚರ್ಚೆ ಜೋರಾಗಿದೆ. ಈ ಬಗ್ಗೆ ತನಿಖೆ ಬಳಿಕವೇ ಸತ್ಯಾಂಶ ಹೊರಬರಲಿದೆ.
ವೈರಲ್ ಆಗಿರುವ ಶಾಶ್ವತಗೌಡರ ಫೋಟೊಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಜಯಗೌಡ ಪಾಟೀಲರು, ಅದೊಂದು ನಕಲಿ ಉಗುರು. ಅದನ್ನು ಧರಿಸುವುದನ್ನು ಶಾಶ್ವತಗೌಡರು ಎಂದೋ ಬಿಟ್ಟಿದ್ದಾರೆ. ಇದು ಹಳೆಯ ಫೋಟೊ ಎಂದರು.