ಮುಸ್ಲಿಂರ ಮತದಾನದ ಹಕ್ಕು ಕುರಿತ ಚರ್ಚೆ, ಚಂದ್ರಶೇಖರ ನಾಥ ಸ್ವಾಮೀಜಿ ಹೇಳಿಕೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪ್ರತಿಕ್ರಿಯೆ ಏನು ಗೊತ್ತಾ?

LAXMI HEBBLKAR (13)
Published on

ವಿಜಯಪುರ: ಸಂವಿಧಾನ ಎಲ್ಲರಿಗೂ ಸಮಾನತೆ ನೀಡಿದೆ. ಎಲ್ಲ ಜಾತಿ, ಧರ್ಮ, ಮತದವರಿಗೂ ಮತದಾನದ ಹಕ್ಕು ನೀಡಲಾಗಿದೆ. ರಾಷ್ಟ್ರಪತಿಗೂ ಮತ್ತು ಸಾಮಾನ್ಯ ವ್ಯಕ್ತಿಯ ಮತ ಪ್ರಮಾಣ ಒಂದೇ ಆಗಿದೆ. ಹೀಗಾಗಿ ಯಾರದ್ದೋ ಮತದಾನದ ಹಕ್ಕು ಕಸಿದುಕೊಳ್ಳುವ ಬಗ್ಗೆ ಮಾತನಾಡುವುದು ಸ್ವಾಮೀಜಿಗಳ ಸಂಸ್ಕೃತಿಯಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪ್ರತಿಕ್ರಿಯಿಸಿದರು.

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರೈತ ಘರ್ಜನೆ ಹೆಸರಿನಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಮಾತನಾಡಿರುವ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಚಂದ್ರಶೇಖರ ನಾಥ ಸ್ವಾಮೀಜಿ ಹೇಳಿಕೆಗೆ ಸಂಬಂಧಿಸಿದಂತೆ ಬುಧವಾರ ಅಕ್ಕಮಹಾದೇವಿ ಮಹಿಳಾ ವಿವಿ ಯುವಜನೋತ್ಸವಕ್ಕೂ ಮುನ್ನ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೊದಲನೇದಾಗಿ ಸ್ವಾಮೀಜಿಗಳ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವಳಲ್ಲ, ಅದು ನಮ್ಮ ಸಂಸ್ಕೃತಿಯಲ್ಲ ಎಂದರು.

ಮುಂದುವರಿದು ಸ್ವಾಮೀಜಿಗಳ ಸಂಸ್ಕೃತಿಯೂ ಅದಲ್ಲ. ನಾವು ನಮ್ಮ ಚೌಕಟ್ಟಿನಲ್ಲಿರಬೇಕು. ನಿನ್ನೆಯಷ್ಟೇ ಸಂವಿಧಾನ ದಿನ ಆಚರಿಸಿದ್ದೇವೆ. ಈ ದೇಶದ ಸಂವಿಧಾನ ಎಲ್ಲ ದಾರ್ಶನಿಕರು, ಭಾಷಿಕರು, ಧರ್ಮದವರು, ಎಲ್ಲ ಜಾತಿ-ಜನಾಂಗದವರಿಗೆ ಸಮಾನ ಹಕ್ಕುಗಳನ್ನು ನೀಡಿದೆ. ರಾಷ್ಟ್ರಪತಿಗಳಿಗೂ ಮತದಾನ ಹಕ್ಕು ಸಾಮಾನ್ಯನಿಗೂ ಇದೇ ಹಕ್ಕು ಇದೆ. ಹೀಗಾಗಿ ಸ್ವಾಮಿಜಿಗಳು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕು. ಇಂಥ ಮತನ್ನಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳಬಾರದು ಎಂದರು.

ಪಂಚಮಸಾಲಿ ಮೀಸಲಾತಿ ಹೋರಾಟ

ಪಂಚಮಸಾಲಿ ಮೀಸಲಾತಿ ಹೋರಾಟ ಬಿಜೆಪಿ ಅಧಿಕಾರದಲ್ಲಿದ್ದಾಗ ಮಾತ್ರ ಜೋರಾಗುತ್ತದೆಯೇ ? ಕಾಂಗ್ರೆಸ್ ಅವಧಿಯಲ್ಲಿ ಏಕೆ ಮಂಕು? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ ಹೆಬ್ಬಾಳಕರ, ಪಂಚಮಸಾಲಿ ಹೋರಾಟ ಪಕ್ಷತೀತ. ಇದರಲ್ಲಿ ರಾಜಕಾರಣ ಇಲ್ಲ. ನಾನೂ ಹೋರಾಟದ ಮುಂಚೂಣಿಯಲ್ಲಿದ್ದು ಹೋರಾಟ ಮಾಡಿದ್ದೆ ಮತ್ತು ಈಗಲೂ ಹೋರಾಟ ಮಾಡುತ್ತಿದ್ದೇನೆ ಎಂದರು.

ನಮ್ಮ ಹೋರಾಟ ಯಾವುದೇ ಸರ್ಕಾರದ ವಿರುದ್ದ ಅಲ್ಲ. ಸಮಾಜಕ್ಕೆ ನ್ಯಾಯ ಕೊಡಬೇಕೆಂಬುದಷ್ಟೇ ನಮ್ಮ ಉದ್ದೇಶ. ಇದರಲ್ಲಿ ಒಡಕು ಇಲ್ಲ. ಮೊದಲಿನಂತೆಯೇ ಹೋರಾಟವಿದ್ದು, ಸಚಿವೆಯಾದ ಕಾರಣ ಕೆಲಸಗಳ ಒತ್ತಡವಿರುವ ಕಾರಣ ಕೆಲ ಹೋರಾಟದಲ್ಲಿ ಭಾಗಿಯಾಗಿಲ್ಲ. ಆದರೆ, ನನ್ನ ಸಹೋದರ ಹಾಗೂ ಪುತ್ರನನ್ನು ಕಳುಹಿಸಿದ್ದೇನೆಂದರು. ಸಮಾಜ ಬಿಟ್ಟು ನಾನಿಲ್ಲ-ನನ್ನ ಬಿಟ್ಟು ಸಮಾಜವಿಲ್ಲ. ಅಧಿವೇಶನದ ವೇಳೆ ಹೋರಾಟ ಮಾಡುತ್ತೇವೆ. ಆದರೆ, ಸ್ವಾಮೀಜಿಗಳು ಸರ್ಕಾರಕ್ಕೆ ಮುಜುಗರ ತರುವಂತೆ ಮಾಡಬಾರದು ಎಂದು ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿಯನ್ನುದ್ದೇಶಿಸಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net