

ವಿಜಯಪುರ: ಉತ್ತರ ಕರ್ನಾಟಕದಲ್ಲೇ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುವ ನವರಾತ್ರಿ ಉತ್ಸವಕ್ಕೆ ತಾಂಬಾ ಗ್ರಾಮ ಸಜ್ಜಾಗಿದೆ.
ನಾಡಹಬ್ಬ ಮೈಸೂರು ದಸರಾ ಬಳಿಕ ಅತ್ಯಂತ ದೊಡ್ಡ ಉತ್ಸವ ಎಂಬ ಹೆಗ್ಗಳಿಕೆಗೆ ಈ ಗ್ರಾಮ ಭಾಜನವಾಗಿದ್ದು, ಇದಕ್ಕೆ ಅರ್ಧ ಶತಮಾನಕ್ಕೂ ಅಧಿಕ ಇತಿಹಾಸವಿದೆ. ಪ್ರತಿ ವರ್ಷ ರಾಜ್ಯ ಮಟ್ಟದ ಗಮನ ಸೆಳೆಯುವ ನಿಟ್ಟಿನಲ್ಲಿ ಹಮ್ಮಿಕೊಳ್ಳುತ್ತಾ ಬಂದಿರುವ ಈ ಉತ್ಸವವನ್ನು ಈ ಬಾರಿ ಸೆ. 22 ರಿಂದ 9 ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದೆಂದು ಶ್ರೀ ಅಂಬಾಭವಾನಿ ಎಜ್ಯುಕೇಶನ್ ಟ್ರಸ್ಟ್, ಶ್ರೀ ಜಗದಂಭಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ಡಾ.ದೇವಾನಂದ ಚವಾಣ್ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿಕ್ಷಣಪ್ರೇಮಿ ದಿ.ಫೂಲಸಿಂಗ್ ಚವಾಣ್ ಅವರ ನೇತೃತ್ವದಲ್ಲಿ 54 ವರ್ಷಗಳಿಂದ ದಸರಾ ಆಚರಿಸಲಾಗುತ್ತಿದೆ. ಒಂದು ದಿನ ರಾತ್ರಿ ಕನಸ್ಸಿನಲ್ಲಿ ಬಂದು ಪ್ರೇರಣೆ ನೀಡಿದ ಜಗನ್ಮಾತೆ ಬನ್ನಿ ಗಿಡದಲ್ಲಿ ಚಿಕ್ಕದಾದ ಬೆಳ್ಳಿ ಮೂರ್ತಿಯಾಗಿ ಫೂಲಸಿಂಗ್ ಅವರಿಗೆ ಸಿಕ್ಕಿದ್ದರಿಂದ ಅಂದಿನಿಂದ ವಿಜೃಂಭಣೆಯಿಂದ ನಾಡದೇವಿ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ತಮ್ಮ ಮನೆತನಕ್ಕೆ ಜಗನ್ಮಾತೆಯ ಆಶೀರ್ವಾದವಿದೆ ಎಂದು ದೇವಾನಂದ ಚವಾಣ್ ಅವರು ತಿಳಿಸಿದರು.
ನಾಡದೇವಿಯ ಉತ್ಸವ ಮೂರ್ತಿಯ ಭವ್ಯ ಮೆರವಣಿ, 2001 ಮಹಿಳೆಯರಿಂದ ಪೂರ್ಣಕುಂಭ ಹೊತ್ತು ಭವ್ಯ ಮೆರವಣಿಗೆ, ಯಕ್ಷಗಾನ, ನಾಸಿಕ್ ಡೋಲು, ಬೃಹತ್ ಬೊಂಬೆಗಳು, ಲೇಝಿಮ್ ನಿನಾದ, ನವಿಲು ಕುಣಿತ, ಕರಡಿ ಕುಣಿತ, ಕೀಲುಕುದುರೆ ಕುಣಿತ, ಜಗ್ಗಲಿಗೆ ಮೇಳ ಹೀಗೆ ದೇಶಿಯ ಕಲಾಪ್ರಕಾರಗಳು ನವರಾತ್ರಿಯ ಆಕರ್ಷಣೆಯಾಗಿವೆ. ಗ್ರಾಮೀಣ ಕ್ರೀಡೆಗಳ ಮೆರಗು ಹೆಚ್ಚಲಿದೆ ಎಂದರು.
ಸೆ.22 ರಂದು ಕಾತ್ರಾಳ ಗುರುದೇವಾಶ್ರಮದ ಅಮೃತಾನಂದ ಸ್ವಾಮೀಜಿ, ಖ್ಯಾತ ಜೋತಿಷಿ ಗಿರಿಧರ ರಾಜು ಅವರ ಸಾನ್ನಿಧ್ಯದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಚಿವ ಡಾ.ಎಂ.ಬಿ. ಪಾಟೀಲ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರ ಕುಂಭಮೇಳಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಭೀಮಾ ನಾಯಕ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಶಾಸಕ ಅಶೋಕ ಮನಗೂಳಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಆಗಮಿಸಲಿದ್ದಾರೆ. ಅನ್ನದಾಸೋಹಕ್ಕೆ ಸಿಂದಗಿ ಶಾಸಕ ರಮೇಶ ಭೂಸನೂರ ಚಾಲನೆ ನೀಡಲಿದ್ದಾರೆ. ಸಾಧಕರಿಗೆ ಗೌರವ ಸನ್ಮಾನ ನೆರವೇರಿಸಲಾಗುವುದು ಎಂದರು.
ಸೆ.23 ರಂದು ಬೆಳಗ್ಗೆ ಖೋಖೋ ಪಂದ್ಯಾವಳಿ, ಅದೇ ದಿನ ರಾತ್ರಿ 8 ಕ್ಕೆ ಕೋಲಾಟ, ಸೆ.24 ರಂದು ಬೆಳಗ್ಗೆ ಖೋಖೋ, ರಾತ್ರಿ 8 ಕ್ಕೆ ಜಾನಪದ ಜಾತ್ರೆ ನಡೆಯಲಿದೆ. ಸೆ.26 ರಂದು ಲೋಕ ಕಲ್ಯಾಣಾರ್ಥವಾಗಿ ನವಚಂಡಿ ಹೋಮ, ನಾಡದೇವಿ ತೆರೆಬಂಡಿ ವೈಭವ ನಡೆಯಲಿದೆ. ಅದೇ ದಿನ ರಾತ್ರಿ 8 ಕ್ಕೆ ಕರಿಮಣಿ ಮಾಲೀಕ ನೀನಲ್ಲ ಎಂಬ ನಾಟಕ ಪ್ರದರ್ಶನ ನಡೆಯಲಿದೆ, ಸೆ.27 ರಂದು ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ಅ. 2 ರಂದು ಚಿತ್ತಾಕರ್ಷಕ ಮದ್ದು ಸುಡುವ ಕಾರ್ಯಕ್ರಮ ನಡೆಯಲಿವೆ ಎಂದು ಡಾ.ಚವಾಣ್ ವಿವರಿಸಿದರು.
ನಾಡದೇವಿ ಉತ್ಸವ ಸಮಿತಿ ಅಧ್ಯಕ್ಷ ಅಭಿನವ ಚವಾಣ್, ಕಾರ್ಯದರ್ಶಿ ರವಿಕುಮಾರ ಚವಾಣ್, ಪ್ರೀತಂ ಚವಾಣ್, ರಾಚಪ್ಪ ಗಳೇದ, ಅಪ್ಪಣ್ಣಾ ಕಲ್ಲೂರ, ಮೊಸೀನ್ ವಾಲೀಕಾರ, ಪರಶು ಬಿಸನಾಳ ಮತ್ತಿತರರಿದ್ದರು.