

ವಿಜಯಪುರ: ಕೋರ್ಟ್ ಸಭಾಂಗಣದಲ್ಲಿಯೇ ಕುತ್ತಿಗೆ ಕೊಯ್ದುಕೊಂಡ ಆರೋಪಿಯೊಬ್ಬ ‘ನಾನೇನೂ ತಪ್ಪು ಮಾಡಿಲ್ಲ’ವೆಂದು ಅಬ್ಬರಿಸಿದ ಘಟನೆ ಶುಕ್ರವಾರ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದಿದೆ.
ಇಂಡಿ ತಾಲೂಕಿನ ಸಾವಳಸಂಗ ಗ್ರಾಮದ ಶಿವಾನಂದ ಹೊಸಮನಿ ಎಂಬಾತ ಕತ್ತು ಕೊಯ್ದುಕೊಂಡ ಆರೋಪಿ. ಈತನ ಮೇಲೆ ಹಲವು ಕಳ್ಳತನ ಪ್ರಕರಣಗಳಿದ್ದು, ನ್ಯಾಯಾಲಯ ವಾರೆಂಟ್ ಜಾರಿ ಮಾಡಿತ್ತು. ಶುಕ್ರವಾರ ಬಾಗಲಕೋಟೆ ರಸ್ತೆಯಲ್ಲಿರುವ ಕೆಇಬಿ ಬಳಿ ಶಿವಾನಂದ ಇರುವುದು ಗೊತ್ತಾಗಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ಹಿಡಿದು ನ್ಯಾಯಾಲಯಕ್ಕೆ ಕರೆತಂದಿದ್ದರು.
ಜಿಲ್ಲಾ ಸತ್ರ ನ್ಯಾಯಾಲಯದ ದಿವಾಣಿ ನ್ಯಾಯಾಧೀಶರ ಕಚೇರಿ ಬಳಿ ಬರುತ್ತಿದ್ದಂತೆ ಶಿವಾನಂದ ಬ್ಲೇಡ್‌ನಿಂದ ಕುತ್ತಿಗೆ ಕೊಯ್ದುಕೊಂಡಿದ್ದಾನೆ. ಮೈಯೆಲ್ಲ ರಕ್ತಸಿಕ್ತವಾಗಿದ್ದು, ಕೂಡಲೇ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಬಳಿ ಬ್ಲೇಡ್ ಬಂದಿದ್ದು ಹೇಗೆ ಎಂಬ ಅನುಮಾನ ಕಾಡತೊಡಗಿದ್ದು, ಈ ಬಗ್ಗೆ ತನಿಖೆ ಹಾಗೂ ಆರೋಪಿಗೆ ಚಿಕಿತ್ಸೆ ಮುಂದುವರಿದಿದೆ.